ಪ್ರಾತಿನಿಧಿಕ ಚಿತ್ರ
ಗದಗ: ‘ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕ್ರೂರಿ ಮನುಷ್ಯ. ತನ್ನದೇ ಸಮಾಜದ ಸ್ವಾಮೀಜಿಗೆ ನೋವು ಕೊಟ್ಟ. ನಾನು ಪಕ್ಷದ ಕಾರ್ಯಕರ್ತರೊಬ್ಬರ ಬಳಿ ಮಾತನಾಡಿದ ಆಡಿಯೊ ಜಾಲತಾಣದಲ್ಲಿ ಹರಿದಾಡಿದ ಬಳಿಕ ಜೀವ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹೇಳಿದರು.
‘ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅವರು ಯಾರು, ಎಲ್ಲಿಯವರು ಎಂಬುದು ಗೊತ್ತಿಲ್ಲ’ ಎಂದು ಸೋಮ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿರಹಟ್ಟಿ ಕ್ಷೇತ್ರ ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಬದಲಿಸಬೇಕು ಎಂದು ಅಭಿಪ್ರಾಯ
ವ್ಯಕ್ತಪಡಿಸಿದ್ದಕ್ಕೆ ಶಾಸಕ ಚಂದ್ರು ಲಮಾಣಿ ನನ್ನ ವಿರುದ್ಧ ಸಿಟ್ಟಿಗೆದ್ದಿದ್ದ. ಆಗಿನಿಂದ ಆತನಿಂದ ನನಗೆ ತೊಂದರೆಯಾಗಿದೆ. ಆದರೆ, ಲೋಕಾಯುಕ್ತ ದಾಳಿಗೂ ಮತ್ತು ನನಗೂ ಸಂಬಂಧವಿಲ್ಲ’ ಎಂದರು.
‘ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಶಾಸಕ ಸ್ಥಾನ ಅಮಾನತು ಮಾಡಬೇಕು’ ಎಂದು ಆಗ್ರಹಿಸಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಜನರ ದುಡ್ಡು ನುಂಗಿದವರಿಗೆ ಜೈಲೆ ಗತಿ’ ಎಂದು ಘೋಷಣೆ ಕೂಗಿದರು. ‘ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ’ ಎಂದು ಎಚ್ಚರಿಕೆ ನೀಡಿದರು.
ಈ ಮಧ್ಯೆ ಬಿಜೆಪಿಯ ಕಾರ್ಯಕರ್ತರು, ಲೋಕಾಯುಕ್ತರಿಗೆ ದೂರು ನೀಡಿದ್ದ ವಿಜಯ ಪೂಜಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಫೇಸ್‌ಬುಕ್ ಖಾತೆ ಮಾಹಿತಿ ಆಧರಿಸಿ, ‘ಕಾಂಗ್ರೆಸ್ ನಾಯಕರೊಂದಿಗೆ ವಿಜಯ ಪೂಜಾರ ಗುರುತಿಸಿಕೊಂಡಿದ್ದಾರೆ. ಅವರದ್ದೇ ಷಡ್ಯಂತ್ರದಿಂದ ಶಾಸಕರಿಗೆ ಅನ್ಯಾಯವಾಗಿದೆ’
ಎಂದರು.
ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ವಿರುದ್ಧ ಪಡ್ಯಂತ್ರ ನಡೆದಿದೆ. ಒತ್ತಾಯದಿಂದ ಹಣ ನೀಡಲಾಗಿದೆ. ಲಂಚ ಪಡೆಯುವಂತೆ ಒತ್ತಾಯಿಸುವುದು ತಪ್ಪು. ಈ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ಆಗಬೇಕುಬಸವರಾಜ ಬೊಮ್ಮಾಯಿ, ಸಂಸದ
ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಪಿತೂರಿ ಮಾಡಿ, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದಕ್ಕೆ ಅದೇ ಸಮುದಾಯದ ವ್ಯಕ್ತಿ ಬಳಸಿಕೊಳ್ಳಲಾಗಿದೆ. ಇದರ ವಿರುದ್ಧ ಧ್ವನಿ ಎತ್ತುವೆರಮೇಶ ಜಾರಕಿಹೊಳಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.