ADVERTISEMENT

ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ | ಜ. 21 ದಾಸೋಹ ದಿನ: ಬಿಎಸ್‌ವೈ

ವಸ್ತು ಸಂಗ್ರಹಾಲಯಕ್ಕೆ ₹ 10 ಕೋಟಿ; ಪುಣ್ಯ ಸ್ಮರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 19:30 IST
Last Updated 21 ಜನವರಿ 2021, 19:30 IST
ಯಡಿಯೂರಪ್ಪ
ಯಡಿಯೂರಪ್ಪ   

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜ. 21ಅನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.

ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು. ‘ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವಾಗಿ ಘೋಷಿಸಲಾಗುವುದು’ ಎನ್ನುತ್ತಿದ್ದಂತೆ
ಸಹಸ್ರಾರು ಭಕ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಶಿವಕುಮಾರ ಸ್ವಾಮೀಜಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಮೊಳಗಿಸಿದರು.

‘ದಾಸೋಹ ದಿನ’ ಘೋಷಿಸುವಂತೆ ವಿವಿಧ ಮಠಾಧೀಶರು, ಭಕ್ತರು ಸಹ ಆಗ್ರಹಿಸಿದ್ದರು. ವೇದಿಕೆಯಲ್ಲಿದ್ದ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಮ್ಮ ಭಾಷಣದಲ್ಲಿಯೂ ಈ ಬಗ್ಗೆ ಮನವಿ ಮಾಡಿದ್ದರು. ಎಲ್ಲರ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದರು.

ADVERTISEMENT

‘ಈಗಾಗಲೇ ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಪ್ರಧಾನಿನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ವಸ್ತು ಸಂಗ್ರಹಾಲಯದ ಕಟ್ಟಡ ನಿರ್ಮಾಣಕ್ಕೆ ₹ 10 ಕೋಟಿ ಅಗತ್ಯವಿದ್ದು, ಹಣ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದ ಅಭಿವೃದ್ಧಿಗೆ ₹ 80 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈಗಾಗಲೇ ₹ 25 ಕೋಟಿ ಬಿಡುಗಡೆ ಮಾಡಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದರು.

‘ನಾನು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕೊಠಡಿಗೆ ಕರೆದುಕೊಂಡು ಹೋಗಿ ವಿವಿಧ ವಿಚಾರಗಳ ಕುರಿತು ಸಲಹೆ, ಸೂಚನೆಗಳನ್ನು ಕೊಡುತ್ತಿದ್ದರು. ನನ್ನ ದಿನಚರಿ ಆರಂಭ ಆಗುವುದೇ ಸ್ವಾಮೀಜಿ ಸ್ಮರಣೆಯೊಂದಿಗೆ’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.