ADVERTISEMENT

ಸಿದ್ಧಗಂಗಾಮಠಕ್ಕೆ ಆಗಮಿಸಿದ ಶಿವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 14:19 IST
Last Updated 19 ಡಿಸೆಂಬರ್ 2018, 14:19 IST
ಸ್ವಾಮೀಜಿ ಕಾಣಲು ಕಾದು ಕುಳಿತ ವಿದ್ಯಾರ್ಥಿ ಸಮೂಹ
ಸ್ವಾಮೀಜಿ ಕಾಣಲು ಕಾದು ಕುಳಿತ ವಿದ್ಯಾರ್ಥಿ ಸಮೂಹ   

ತುಮಕೂರು: ಅಮ್ಮನನ್ನು ಕಂಡು ಮಗು ಓಡಿ ಬಂದಂತೆ, ಹಸುವನ್ನು ಕಂಡ ಕರು ಚಂಗನೆ ನೆಗೆದು ಬಂದಂತೆ ಸಾವಿರಾರು ಮಕ್ಕಳು ಓಡೋಡಿ ಬಂದರು. ಶಿವಕುಮಾರ ಸ್ವಾಮಿಗಳಿಗೆ ಜೈ ಎನ್ನುವ ಹರ್ಷೋದ್ಗಾರ ಮೊಳಗಿಸಿದರು. ಸ್ವಾಮೀಜಿ ಇದ್ದ ಆಂಬುಲೆನ್ಸ್‌ನ ಎಡ ಹಾಗೂ ಬಲ ಬದಿಯಲ್ಲಿ ಕೈ ಮುಗಿದು ನಿಂತರು.

ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಿವಕುಮಾರ ಸ್ವಾಮೀಜಿ ಬುಧವಾರ ಸಿದ್ಧಗಂಗಾ ಮಠಕ್ಕೆ ಬಂದಾಗ ಕಂಡ ದೃಶ್ಯವಿದು.

ಬೆಳಿಗ್ಗೆ 11ಕ್ಕೆಸ್ವಾಮೀಜಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದರು. ‘ಐ ಕ್ಯಾಟ್ ಏರ್ ಆಂಬುಲೆನ್ಸ್’ನಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಾಯಿತು. ಅಲ್ಲಿಂದ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯ ಮೂಲಕ ಆಂಬುಲೆನ್ಸ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಮಠಕ್ಕೆ ಬಂದರು.

ADVERTISEMENT

ಪೊಲೀಸ್ ಭದ್ರತೆಯಲ್ಲಿ ಆಂಬುಲೆನ್ಸ್ ಮಠದ ಅಂಗಳಕ್ಕೆ ಬರುತ್ತಿದ್ದಂತೆಯೇ ವಸತಿ ನಿಲಯದ ಸಾವಿರಾರು ಮಕ್ಕಳು ಒಮ್ಮೆಯೇ ಓಡಿ ಬಂದರು.

‘ನಾವು ಬುದ್ಧಿಯವರನ್ನು ನೋಡ್ಬೇಕು. ಬಿಡಿ...ಬಿಡಿ’ ಎಂದು ಪೊಲೀಸರು ಮತ್ತು ಅಧಿಕಾರಿಗಳಲ್ಲಿ ಕೋರಿದರು.

‘ಹಳೇ ಮಠದ ಅವರ ಕೊಠಡಿಯನ್ನು ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡವು ವಿಶೇಷ ವಾರ್ಡ್ ಆಗಿ ಪರಿವರ್ತಿಸಿದೆ. ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

‘ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕ ಇಲ್ಲ. ಬುಧವಾರ ಬೆಳಿಗ್ಗೆ ಬಾಳೆ ಹಣ್ಣು, ಪಪ್ಪಾಯಿ, ಇಡ್ಲಿ ಸೇವಿಸಿದರು. ಚಿಕಿತ್ಸೆಗಾಗಿ ದಿನದ 24 ತಾಸು ವೈದ್ಯರ ತಂಡ ನಿಯೋಜಿಸಲಾಗಿದೆ’ ಎಂದು ಸ್ವಾಮೀಜಿ ಅವರ ಚಿಕಿತ್ಸೆ ಉಸ್ತುವಾರಿ ವಹಿಸಿರುವ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.