ADVERTISEMENT

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ವಂಚನೆ ಪ್ರಕರಣ: ₹13.91 ಕೋಟಿಯ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:59 IST
Last Updated 6 ಜೂನ್ 2025, 15:59 IST
ಆರ್.ಎಂ.ಮಂಜುನಾಥಗೌಡ
ಆರ್.ಎಂ.ಮಂಜುನಾಥಗೌಡ   

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (ಡಿಸಿಸಿ) ನಕಲಿ ಚಿನ್ನಾಭರಣ ಅಡವಿಟ್ಟು ₹62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್‌ನ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರಿಗೆ ಸೇರಿದ ₹13.91 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇ.ಡಿ, ‘2014ರಲ್ಲಿ ಮಂಜುನಾಥಗೌಡ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾಗ ಈ ಅಕ್ರಮ ನಡೆದಿತ್ತು. ಅವರ ಆಣತಿಯಂತೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾಗಿದ್ದ ಬಿ.ಶೋಭಾ ಅವರು ಎಲ್ಲ ಅಕ್ರಮ ವರ್ಗಾವಣೆಗಳನ್ನು ನಡೆಸಿದ್ದರು’ ಎಂದು ತಿಳಿಸಿದೆ.

‘ಇದೇ ಏಪ್ರಿಲ್‌ನಲ್ಲಿ ಪ್ರಕರಣದ ಸಂಬಂಧ ಮಂಜುನಾಥಗೌಡ ಅವರ ಮನೆ, ಆಪ್ತರ ಮನೆ ಮತ್ತು ಶಿವಮೊಗ್ಗ ಡಿಸಿಸಿ ಕೇಂದ್ರ ಬ್ಯಾಂಕ್‌, ನಗರ ಶಾಖಾ ಬ್ಯಾಂಕ್‌ನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಅಕ್ರಮದಿಂದ ಗಳಿಸಿದ ಹಣದಿಂದ ಮಂಜುನಾಥಗೌಡ ಅವರು ಹಲವು ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ ಎಂಬುದನ್ನು ಸೂಚಿಸುವ ಸಾಕ್ಷ್ಯಗಳು ಲಭ್ಯವಾಗಿದ್ದವು’ ಎಂದು ತಿಳಿಸಿದೆ.

ADVERTISEMENT

‘ಶೋಧ ಕಾರ್ಯದ ವೇಳೆ ಡಿಜಿಟಲ್ ಸಾಕ್ಷ್ಯಗಳು, 2.50 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಮಂಜುನಾಥ ಅವರ ಪತ್ನಿ ಅವರ ಹೆಸರಿನಲ್ಲಿ ಇರುವ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದೆ’ ಎಂದು ಇ.ಡಿ ತಿಳಿಸಿದೆ.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಮಂಜುನಾಥಗೌಡ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಭೋವಿ ನಿಗಮದ ಪ್ರಕರಣ: ಪ್ರಾಸಿಕ್ಯೂಷನ್‌ ದೂರು ದಾಖಲು

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ₹88.9 ಕೋಟಿ ಅಕ್ರಮ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಗಮದ ಹಿಂದಿನ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಮತ್ತು ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ವಿರುದ್ಧ ಇ.ಡಿಯು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ದಲ್ಲಿ ಪ್ರಾಸಿಕ್ಯೂಷನ್‌ ದೂರು ದಾಖಲಿಸಿದೆ.

‘ಬಿ.ಕೆ.ನಾಗರಾಜ‍ಪ್ಪ ಮತ್ತು ಆರ್‌.ಲೀಲಾವತಿ ಅವರು ತಾವು ಅಧಿಕಾರಲ್ಲಿದ್ದಾಗ ಫಲಾನುಭವಿಗಳ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಆಪ್ತರು ಮತ್ತು ಸಂಬಂಧಿಗಳ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾಯಿಸಿಕೊಂಡಿದ್ದರು’ ಎಂದು ನ್ಯಾಯಾಲಯಕ್ಕೆ ವಿವರ ಸಲ್ಲಿಸಿದೆ.

‘ನಾಗರಾಜಪ್ಪ ಅವರ ಪಾಲುದಾರಿಕೆ ಇರುವ ‘ನ್ಯೂ ಡ್ರೀಮ್ ಎಂಟರ್‌ಪ್ರೈಸಸ್‌’, ‘ಆದಿತ್ಯಾ ಕಂಪನಿ’, ‘ಅನ್ನಿಕಾ ಎಂಟರ್‌ಪ್ರೈಸಸ್’, ‘ಹರ್ನಿತಾ ಕ್ರಿಯೇಷನ್ಸ್’ ಮತ್ತು ‘ಸೋಮೇಶ್ವರ ಎಂಟರ್‌ಪ್ರೈಸಸ್’ ಎಂಬ ಕಂಪನಿಗಳಿಗೆ ನಿಗಮದ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಆ ಹಣವನ್ನು ನಾಗರಾಜಪ್ಪ ಮತ್ತು ಇತರರು ಬಳಸಿಕೊಂಡಿದ್ದಾರೆ’ ಎಂದು ವಿವರಿಸಿದೆ.

‘ಅಕ್ರಮದ ಹಣದಿಂದ ನಾಗರಾಜಪ್ಪ ಚರಾಸ್ತಿ, ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ₹27.27 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಇ.ಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.