ADVERTISEMENT

ನಾಳೆಯಿಂದ ನಾಲ್ಕು ದಿನ ಶಿವಮೊಗ್ಗ ಬಂದ್‌: ಪ್ರಗತಿಪರರ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಮೇ 2021, 11:17 IST
Last Updated 11 ಮೇ 2021, 11:17 IST
   

ಶಿವಮೊಗ್ಗ: ಮೇ 13ರಿಂದ 16ರವರೆಗೆ ನಾಲ್ಕು ದಿನಗಳು ಶಿವಮೊಗ್ಗ ನಗರ ಸಂಪೂರ್ಣ ಬಂದ್‌ ಮಾಡಲು ಜಿಲ್ಲಾಡಳಿತ, ನಗರ ಪಾಲಿಕೆ ನಿರ್ಧಾರ ತೆಗೆದುಕೊಂಡಿವೆ.

ಶಿವಮೊಗ್ಗ ನಗರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹಾಗಾಗಿ, ಕಠಿಣ ನಿರ್ಬಂಧ ಅನಿವಾರ್ಯ. ಈ ಅವಧಿಯಲ್ಲಿ ಎಲ್ಲಾ ಕೈಗಾರಿಕಾ ಚಟುವಟಿಕೆಗಳು, ಸಗಟು ವ್ಯಾಪಾರ, ಎಪಿಎಂಸಿ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ಖರೀದಿಗಷ್ಟೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.

ಈ ನಾಲ್ಕು ದಿನಗಳು ಪ್ರತಿಯೊಬ್ಬರೂ ತಮ್ಮ ನೆರೆಹೊರೆಯಲ್ಲೇ ಹಾಲು, ತರಕಾರಿ ಖರೀದಿಸಬೇಕು. ಎಲ್ಲರೂ ಮನೆಯಲ್ಲಿಯೇ ಇದ್ದು, ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಉತ್ತಮಪಡಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೊರಬ ಮತ್ತು ಆನವಟ್ಟಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿವೆ. ಶಿವಮೊಗ್ಗ ನಗರದ ಹೊಟೇಲ್‌ಗಳಲ್ಲಿ ಐಸೋಲೇಶನ್ ಸೌಲಭ್ಯ ಬಯಸುವ ಕೋವಿಡ್ ರೋಗಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಇರುವ ನಾಗರಿಕರು ಸವಲಭ್ಯ ಪಡೆಯಬಹುದು ಎಂದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬೆರಳಚ್ಚು ನೀಡುವ ಮೊದಲು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಸೂಚಿಸಿದರು.

ಪ್ರಗತಿಪರರ ವಿರೋಧ, ಮುಖ್ಯಮಂತ್ರಿಗೆ ಮೊರೆ:

ನಾಲ್ಕು ದಿನಗಳ ಬಂದ್‌ಗೆ ಪ್ರಗತಿಪರರು, ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಂಜಾನ್‌ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಂದ್‌ ನಿರ್ಧಾರ ತೆಗೆದುಕೊಂಡಿರುವುದು ಬೇರೆ ಸಂದೇಶ ನೀಡುತ್ತದೆ. ಈಗಾಗಲೇ ಸರ್ಕಾರ ಜಾರಿಗೆ ತಂದ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸಲಾಗುತ್ತಿದೆ. ಹೊಸ ನಿರ್ಬಂಧಗಳ ಅಗತ್ಯವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು. ಬಂದ್‌ ನಿರ್ಧಾರ ಹಿಂದಕ್ಕೆ ಪಡೆಯಲು ಸೂಚಿಸಬೇಕು ಎಂದು ಸ್ವರಾಜ್‌ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್, ಪೀಸ್‌ ಆರ್ಗನೈಜೇಷನ್ ಅಧ್ಯಕ್ಷ ರಿಯಾಜ್ ಆಹಮದ್‌ ಮತ್ತಿತರರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.