ADVERTISEMENT

ರಾಜ್ಯದಲ್ಲಿ ಅತ್ಯಂತ ಕಡಿಮೆ ರೈಲು ಜಾಲ: ಲೋಕಸಭೆಯಲ್ಲಿ ಸಂಸದ ಕುಮಾರ ನಾಯಕ

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕನ್ನಡದಲ್ಲಿ ಮಾತನಾಡಿದ ಸಂಸದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:37 IST
Last Updated 11 ಫೆಬ್ರುವರಿ 2025, 14:37 IST
   

ನವದೆಹಲಿ: ‘ಕರ್ನಾಟಕದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 2.62 ಕಿ.ಮೀ. ಮಾತ್ರ ರೈಲು ಜಾಗ ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಇದರ ಎರಡು ಪಟ್ಟು ಹಾಗೂ ಪಶ್ಚಿಮ ಬಂಗಾಳದಲ್ಲಿ ನಾಲ್ಕು ಪಟ್ಟು ಇದೆ. ಈ ಅನ್ಯಾಯ ಸರಿಪಡಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಸಲದ ಬಜೆಟ್‌ನಲ್ಲೂ ಭಾರಿ ಅನ್ಯಾಯ ಮಾಡಲಾಗಿದೆ’ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಆಕ್ರೋಶ ವ್ಯಕ್ತಪಡಿಸಿದರು. 

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕನ್ನಡದಲ್ಲಿ ಮಾತನಾಡಿದ ಅವರು, ಬಸವಣ್ಣ ಅವರ ವಚನ ಹಾಗೂ ಕುವೆಂಪು ಅವರ ಕವಿವಾಣಿ ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಕರ್ನಾಟಕವು ದೇಶದಲ್ಲೇ ಅತ್ಯಂತ ಕಡಿಮೆ ರೈಲ್ವೆ ಸಾಂದ್ರತೆ ಹೊಂದಿದೆ. ವಂದೇ ಭಾರತ್‌, ನಮೋ ಭಾರತ್ ಸೇರಿದಂತೆ ಹೊಸ ರೈಲು ಸೇವೆಗಳನ್ನು ಹೆಚ್ಚು ರೈಲು ಜಾಗ ಇರುವ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಹಿಂದುಳಿದ ಜಿಲ್ಲೆಗಳು ಹಾಗೂ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ. ಆಲಮಟ್ಟಿ–ಯಾದಗಿರಿ ರೈಲು ಮಾರ್ಗ ಸೇರಿದಂತೆ ರಾಜ್ಯದ ರೈಲ್ವೆ ಯೋಜನೆಗಳಿಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಅವರು ಆಗ್ರಹಿಸಿದರು. 

ADVERTISEMENT

15ನೇ ಕೇಂದ್ರ ಹಣಕಾಸು ಆಯೋಗವು ಕರ್ನಾಟಕದ ತೆರಿಗೆ ಪಾಲನ್ನು ಶೇ 23ರಷ್ಟು ಕಡಿಮೆ ಮಾಡಿದೆ. ಪಾಲು ಶೇ 4.7ರಿಂದ ಶೇ 3.6ಕ್ಕೆ ಇಳಿದಿದೆ. 16ನೇ ಹಣಕಾಸು ಆಯೋಗದ ವರದಿಯು ಶೀಘ್ರದಲ್ಲೇ ಹಣಕಾಸು ಸಚಿವರ ಕೈಗಳನ್ನು ಮತ್ತೊಮ್ಮೆ ಕಟ್ಟಿಹಾಕಲಿದೆ. ಈ ವರದಿಯು  ನೆಲದ ವಾಸ್ತವಗಳನ್ನು ಪ್ರತಿಬಿಂಬಿಸಬೇಕು. ಸಮತೋಲಿತ ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜ್ಯಗಳು ತಮ್ಮ ನ್ಯಾಯಯುತ ಪಾಲನ್ನು ಪಡೆಯಬೇಕು’ ಎಂದು ಅವರು ಹೇಳಿದರು. 

‘ಏಮ್ಸ್‌ ಸ್ಥಾಪನೆಗಾಗಿ ರಾಯಚೂರಿನ ಜನರು ಸಾವಿರ ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಈ ಸಲವೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಏಮ್ಸ್‌ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಘೋಷಣೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು. 

‘ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸಂಖ್ಯೆ ಶೇ 25ರಷ್ಟಿದೆ. ಮುಸ್ಲಿಮರು ಶೇ 19ರಷ್ಟಿದ್ದಾರೆ. ಆದರೆ, ಈ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ ತೀರಾ ಕಡಿಮೆ. ಪರಿಶಿಷ್ಟರ ಜನಸಂಖ್ಯೆಗೆ ತಕ್ಕಂತೆ ಅನುದಾನ ಹಂಚಿಕೆ ಮಾಡಲು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರಗಳು ಕಾಯ್ದೆ ರೂಪಿಸಿವೆ. ಆದರೆ, ಕೇಂದ್ರ ಸರ್ಕಾರ ಈ ವರೆಗೂ ಕಾಯ್ದೆ ರೂಪಿಸಿಲ್ಲ. ಇದರಿಂದ, ಶೋಷಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಅವರು ಗಮನ ಸೆಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.