ADVERTISEMENT

ಪ್ರಚೋದನಕಾರಿ ಭಾಷಣ; ಗರಗದ ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:35 IST
Last Updated 24 ಏಪ್ರಿಲ್ 2019, 19:35 IST

ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಪ್ರಚೋದನಕಾರಿ ಭಾಷಣ ಮಾಡಿ, ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ, ಗರಗ ಗ್ರಾಮದ ಶ್ರುತಿ ಬೆಳ್ಳಕ್ಕಿ ಎಂಬುವವರನ್ನು ಬುಧವಾರ ಬಂಧಿಸಲಾಗಿದೆ.ಅವರಿಗೆ ಜಾಮೀನು ನಿರಾಕರಿಸಲಾಗಿದೆ.

ಪ್ರತ್ಯೇಕ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ. ಪಾಟೀಲ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ಪ್ರಚೋದನಾತ್ಮಕ ರೀತಿಯಲ್ಲಿ ಶ್ರುತಿ ಮಾತನಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ‘ವಿಡಿಯೊ ಹಂಚಿಕೆಯಾಗಿರುವುದರ ಹಿಂದೆ, ವಿವಿಧ ವರ್ಗ, ಸಮುದಾಯ ಮತ್ತು ಧರ್ಮಗಳ ನಡುವೆ ವೈರತ್ವ ಸೃಷ್ಟಿಸುವ ದುರುದ್ದೇಶವಿದೆ. ಜತೆಗೆ ವಿನಯ ಕುಲಕರ್ಣಿ ಅವರನ್ನು ಸೋಲಿಸಬೇಕು ಎಂಬ ಹೇಳಿಕೆಯನ್ನೂ ನೀಡಿದ್ದಾರೆ’ ಎಂದು ದಶರಥರಾವ್ ದೇಸಾಯಿ ಎಂಬುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಪೊಲೀಸರು ಬುಧವಾರ ಬೆಳಿಗ್ಗೆ ಶ್ರುತಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ADVERTISEMENT

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ‘ಮಹಿಳೆ ಮೇಲೆ ದೂರು ಬಂದಿರುವ ಕಾರಣ ಅವರನ್ನು ಅತ್ಯಂತ ಗೌರವಯುತವಾಗಿ ಮಹಿಳಾ ಪೊಲೀಸರೇ ಹೋಗಿ ವಶಕ್ಕೆ ಪಡೆದಿದ್ದಾರೆ. ಕಾನೂನು ಪದವೀಧರೆಯಾಗಿರುವ ಶ್ರುತಿ ಅವರಿಗೆ ಯಾವ ಕಲಂ ಅನ್ವಯ ಬಂಧಿಸಲಾಗುತ್ತಿದೆ ಎಂದೂ ವಿವರಿಸಲಾಗಿದೆ. ಜತೆಗೆ ಅವರ ದೊಡ್ಡಪ್ಪ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲೂ ಅವಕಾಶ ನೀಡಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.