ADVERTISEMENT

ಬಾಯಿ ಮುಚ್ಚಿಕೊಂಡಿರಿ: ಸಚಿವರು,ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 15:36 IST
Last Updated 17 ಜನವರಿ 2025, 15:36 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಹೈಕಮಾಂಡ್‌ ಸೂಚನೆಯ ನಂತರವೂ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದ ಸಚಿವರು ಹಾಗೂ ಶಾಸಕರಿಗೆ ‘ಬಾಯಿ ಮುಚ್ಚಿಕೊಂಡು’ ಇರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಸರ್ಕಾರ, ಪಕ್ಷ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವತ್ತ ಸಚಿವರು, ಶಾಸಕರು, ಪಕ್ಷದ ನಾಯಕರು ಮಾಡಬೇಕು. ಒಳ್ಳೆಯ ಕೆಲಸ ಮಾಡುವ ಮೂಲಕ ಜನ ಮನ್ನಣೆ ಗಳಿಸಬೇಕು. ಪಕ್ಷಕ್ಕೆ ಬಲ ತರಬೇಕು. ಹಾದಿಬೀದಿಯಲ್ಲಿ ಹೇಳಿಕೆ ನೀಡುವ ಮೂಲಕ ಪಕ್ಷ ಹಾಗೂ ಸರ್ಕಾರದ ಚರ್ಚಸ್ಸಿಗೆ ಧಕ್ಕೆ ತರಬಾರದು’ ಎಂದು ಎಚ್ಚರಿಕೆ ನೀಡಿದರು.

ಯಾರೋ ಹೇಳಿದಂತೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಪಕ್ಷಕ್ಕೆ ತನ್ನದೇ ಆದ ಗುರಿ, ದೃಷ್ಟಿಕೋನ ಇಲ್ಲವೇ? ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಥವಾ ಮುಂದುವರಿಕೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷದ ನಾಯಕ ರಾಹುಲ್‌, ಸೋನಿಯಾ ಗಾಂಧಿ ಅವರ ಬಳಿ ಚರ್ಚಿಸಿ, ಸಮಯ ಬಂದಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮೂರು ಜನರು ನೂರು ಮಾತು ಆಡಿದರೆ ಉತ್ತರ ಕೊಡುತ್ತಾ ಕೂರಲು ಆಗದು. ಯಾವಾಗ, ಏನು ಮಾಡಬೇಕು ಎನ್ನುವುದು ಗೊತ್ತಿದೆ ಎಂದರು.

ADVERTISEMENT

ಪರಿಶಿಷ್ಟ ಸಚಿವರು ಮತ್ತು ಶಾಸಕರ ಪ್ರತ್ಯೇಕ ಔತಣಕೂಟ, ಅಧಿಕಾರ ಹಂಚಿಕೆ ಸೂತ್ರ, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಹಿರಂಗ ಹೇಳಿಕೆಗಳಿಂದ ಕರ್ನಾಟಕ ಕಾಗ್ರೆಸ್‌ನಲ್ಲಿ ಬಣ ರಾಜಕೀಯ ಉಲ್ಬಣಗೊಂಡಿತ್ತು. ಮೊದಲು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ಜ.2 ರಂದು ಔತಣಕೂಟ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅವರ ಸಂಪುಟದ ನಾಲ್ವರು ಸಚಿವರು ಭಾಗವಹಿಸಿದ್ದರು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲೆಂದೇ ಕರೆಯಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಇದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸತೀಶ ಜಾರಕಿಹೊಳಿ ನಿವಾಸದಲ್ಲಿ ನಡೆದಿದ್ದ ಔತಣಕೂಟದ ಬೆನ್ನಲ್ಲೇ ಸಮುದಾಯದ ಜನಪ್ರತಿನಿಧಿಗಳ, ಮುಖಂಡರ ಸಭೆಯನ್ನು ಆಯೋಜಿಲು ಗೃಹ ಸಚಿವ ಜಿ. ಪರಮೇಶ್ವರ ಮುಂದಾಗಿದ್ದರು. ಪರಮೇಶ್ವರ ಅವರ ನಡೆಯ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ ಸಭೆ ರದ್ದುಪಡಿಸುವಲ್ಲಿ ಡಿ.ಕೆ. ಶಿವಕುಮಾರ್‌ ಯಶಸ್ವಿ ಆಗಿದ್ದರು. ಇದು ಸಚಿವರಾದ ಜಿ. ಪರಮೇಶ್ವರ, ಕೆ.ಎನ್‌. ರಾಜಣ್ಣ ಮತ್ತು ಸತೀಶ ಜಾರಕಿಹೊಳಿ ಅವರನ್ನು ಕೆರಳಿಸಿತ್ತು.

ಈ ಮಧ್ಯೆಯೇ ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಸಮಾಜಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮೊದಲಾದವರು ‘ಮುಖ್ಯಮಂತ್ರಿಯಾಗಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವರು ಔತಣಕೂಟವನ್ನು ಸಮರ್ಥಿಸಿಕೊಂಡಿದ್ದರು. 

‘ಔತಣಕೂಟ’ ರಾಜಕೀಯಕ್ಕೆ ಪಕ್ಷದ ಹೈಕಮಾಂಡ್‌ ತಡೆ ಒಡ್ಡಿದರೂ ಆಂತರಿಕ ಸಂಘರ್ಷ ಇನ್ನೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಬೆಳಗಾವಿಯಲ್ಲಿ ನಡೆಯುವ ‘ಗಾಂಧಿ ಭಾರತ’ ಸಮಾವೇಶದ ಸಿದ್ಧತೆಗಾಗಿ ಜ.13ರಂದು ಕರೆದಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಮತ್ತು ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನು ಒಳ ಬೇಗುದಿ ಶಮನಕ್ಕೆ ಕಾಂಗ್ರೆಸ್‌ ವರಿಷ್ಠರು ಬಳಸಿಕೊಂಡರೂ ಫಲ ದೊರೆತಿರಲಿಲ್ಲ. ಈಗ ಮಲ್ಲಿಕಾರ್ಜುನ ಖರ್ಗೆ ಅವರೇ ನೇರ ಹೇಳಿಕೆ ನೀಡುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಅಧ್ಯಕ್ಷರ ಬದಲಾವಣೆ ಇಲ್ಲ: ಸುರ್ಜೇವಾಲಾ

ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಅಧ್ಯಕ್ಷರ ಬದಲಾವಣೆ ಆಗುತ್ತಿದ್ದರೆ ಕಾಂಗ್ರೆಸ್ ಸಮಾವೇಶದ ಸಿದ್ಧತೆ ಪರಿಶೀಲಿಸಲು ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಏಕೆ ಬರುತ್ತಿದ್ದರು’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದರು.  ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಚಿವ ಸತೀಶ ಜಾರಕಿಹೊಳಿ ಅವರಿಗೆ ನೋಟಿಸ್ ಕೊಡಲಾಗಿದೆ ಎಂಬ ಬಿಜೆಪಿ ಪ್ರಾಯೋಜಿತ ಆಧಾರರಹಿತ ಮಾತುಗಳ ಮೇಲೆ ವಿಶ್ವಾಸ ಇಡಬೇಡಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.