ADVERTISEMENT

ಕೋವಿಡ್-19 ನಿಯಂತ್ರಣ: 'ಸರ್ಕಾರದ್ದು ದಿನಕ್ಕೊಂದು ನಿರ್ಧಾರ' ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2020, 15:07 IST
Last Updated 10 ಜೂನ್ 2020, 15:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 'ಕೋವಿಡ್-19 ನಿಯಂತ್ರಣದ ವಿಷಯದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ' ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಟೀಕಿಸಿದ್ದಾರೆ.

'ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿರುವ ರಾಜ್ಯ ಸರ್ಕಾರ ಪ್ರತಿದಿನ ಸಡಿಲಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ. ಹೊರರಾಜ್ಯಗಳಿಂದ ಬಂದವರಿಗೆ 14 ದಿನದ ಸಾಂಸ್ಥಿಕ ಕ್ವಾರಂಟೈನ್ ಬದಲಿಗೆ ಹೋಮ್ ಕ್ವಾರಂಟೈನ್ ಮಾತ್ರ ಕಡ್ಡಾಯಗೊಳಿಸಿರುವುದು ಅತ್ಯಂತ ಬೇಜವಾಬ್ದಾರಿ ಕ್ರಮ' ಎಂದು ಹೇಳಿದ್ದಾರೆ.

'ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯೇ ಇಲ್ಲದಿರುವಾಗ ಸೋಂಕು ತಗಲಿಸಿಕೊಂಡವರು ಇನ್ನಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ADVERTISEMENT

'ಸಾಂಸ್ಥಿಕ ಕ್ವಾರಂಟೈನ್‌ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೊಳಪಡಿಸುತ್ತಿದ್ದ ನಿಯಮವನ್ನು ಬದಲಾಯಿಸಿ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸಲು ನಿರ್ಧರಿಸಿರುವುದು ಅತ್ಯಂತ ಅಪಾಯಕಾರಿ ಕ್ರಮ. ಕೊರೊನಾ ಸೋಂಕಿತರಲ್ಲಿ ಶೇ 90ರಷ್ಟು ಜನರಲ್ಲಿ ರೋಗ ಲಕ್ಷಣಗಳೇ ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿರುವಾಗ, ಕ್ವಾರಂಟೈನ್ ಅವಧಿಯಲ್ಲಿ ರೋಗಲಕ್ಷಣ ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸುವ ಮುಖ್ಯಮಂತ್ರಿಗಳ ನಿರ್ಧಾರ ಅಪಾಯಕಾರಿ ಆಗಬಹುದು' ಎಂದು ಹೇಳಿದ್ದಾರೆ.

'ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟ ಶಂಕಿತ ಕೊರೊನಾ ಶಂಕಿತರ ಕೋವಿಡ್ ಪರೀಕ್ಷೆ ನಡೆಸುವುದನ್ನು ಕೈಬಿಟ್ಟಿರುವ ನಿರ್ಧಾರ ಅನುಮಾನಕ್ಕೆಡೆ ಮಾಡಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಲಾಗದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.