ADVERTISEMENT

ಟಿಕಾಯತ್‌‌ ಮೇಲೆ ಹಲ್ಲೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 12:39 IST
Last Updated 30 ಮೇ 2022, 12:39 IST
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)   

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಸೋಮವಾರ ಹಲ್ಲೆ ಮಾಡಿ ಮಸಿ ಬಳಿದಿರುವ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ರಾಜ್ಯ ಸರ್ಕಾರವು ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟದಿದ್ದರೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರುವ ನೈತಿಕತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿಲ್ಲ' ಎಂದು ಹೇಳಿದ್ದಾರೆ.

'ಸಿಎಂ ಅವರೇ, ನೆನಪಿರಲಿ ಈ ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

'ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ದೈಹಿಕ ಹಲ್ಲೆ, ಭಿನ್ನಾಭಿಪ್ರಾಯವನ್ನು ಸಿದ್ಧಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಹನೆ-ಸಜ್ಜನಿಕೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ' ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಕೂಡ ಘಟನೆಯನ್ನು ಖಂಡಿಸಿದ್ದು, 'ರೈತ ಮುಖಂಡ ರಾಕೇಶ್ ಟಿಕಾಯತ್ ಅವರಿಗೆ ಮಸಿ ಬಳಿದಿರುವ ಘಟನೆ ರಾಜ್ಯದ ಭವಿಷ್ಯದ ಬಗೆಗಿನ ಆತಂಕವನ್ನು ಹೆಚ್ಚು ಮಾಡಿದೆ. ಇದು ಕೇವಲ ಟಿಕಾಯತ್ ಅವರ ಮೇಲಾದ ದಾಳಿಯಲ್ಲ. ಪ್ರಜಾಪ್ರಭುತ್ವ, ರೈತ, ಸಿದ್ಧಾಂತಗಳು, ಸಂವಿಧಾನಬದ್ಧ ಹಕ್ಕುಗಳಿಗೆ ಬಳಿದಿರುವ ಮಸಿ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಕೋರುತ್ತೇನೆ' ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಎರಚಿದ್ದ ಆರೋಪದಡಿ ಭಾರತ್ ರಕ್ಷಣಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.