ADVERTISEMENT

ತುರ್ತಾಗಿ ವಿಶೇಷ ಪ್ಯಾಕೇಜ್ ಘೋಷಿಸಿ, ರೈತರ ನೆರವಿಗೆ ಧಾವಿಸಿ: ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ: ಮುಖ್ಯಮಂತ್ರಿಗೆ ಸುದೀರ್ಘ ಪತ್ರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 11:01 IST
Last Updated 14 ಅಕ್ಟೋಬರ್ 2020, 11:01 IST
ಸಿದ್ದರಾಮಯ್ಯ ಮತ್ತು ಬಿ.ಎಸ್‌. ಯಡಿಯೂರಪ್ಪ
ಸಿದ್ದರಾಮಯ್ಯ ಮತ್ತು ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿ ತುರ್ತಾಗಿ ವಿಶೇಷ ಪ್ಯಾಕೇಜ್‌ ಘೋಷಿಸುವ ಮೂಲಕ ರೈತರ ನೆರವಿಗೆ ನಿಲ್ಲಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ‘ಖರೀದಿ ಕೇಂದ್ರಗಳನ್ನು ತಕ್ಷಣ ತೆರೆದು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿರುವ ಮೊತ್ತಕ್ಕಾದರೂ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸಬೇಕು’ ಎಂದೂ ಆಗ್ರಹಿಸಿದ್ದಾರೆ.

‘ಕಳೆದ ವರ್ಷದ ಮಹಾಮಳೆಯ ಕಹಿ ನೆನಪು ಮರೆಯುವ ಮೊದಲೇ ಈ ವರ್ಷ ಮತ್ತೆ ಆಗಸ್ಟ್ ತಿಂಗಳಿನಿಂದ ರಾಜ್ಯದಾದ್ಯಂತ ಅತಿವೃಷ್ಟಿಯಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಂತೂ 50 ವರ್ಷಗಳಲ್ಲಿ ಬೀಳದಷ್ಟು ಮಳೆ ಈ ಬಾರಿ ಸುರಿದಿದೆ. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾದರೆ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಈ ವರ್ಷದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಮುಂತಾದ ಬೆಳೆಗಳನ್ನು ಕೊಯಿಲು ಮಾಡುವ ಸಂದರ್ಭದಲ್ಲಿ ವಿಪರೀತ ಮಳೆ ಸುರಿದು ಗಿಡದಲ್ಲೇ ಮೊಳಕೆ ಬಂದು ಕೊಳೆತು ಹೋದವು. ಈಗ ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನ ಕಾಯಿ, ರಾಗಿ, ಮುಸುಕಿನ ಜೋಳ, ಬಿಳಿ ಜೋಳ ಮುಂತಾದ ಬೆಳೆಗಳು ಸಹ ಹೊಲದಲ್ಲೇ ಕೊಳೆತು ಹೋಗುತ್ತಿವೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೊಗರಿ ಹೂವು ಕಟ್ಟುವ ಸಮಯವಿದು. ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಕಲಬುರ್ಗಿ ಜಿಲ್ಲೆ ಒಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ತೊಗರಿ ಹಾಳಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ. ವಾಡಿಕೆಗಿಂತ ಸುಮಾರು 250 ಮಿ.ಮೀ ಗೂ ಹೆಚ್ಚು ಮಳೆ ಈ ವರ್ಷ ಕಲಬುರ್ಗಿ ಒಂದರಲ್ಲೇ ಸುರಿದಿದೆ. ಇದೇ ಪರಿಸ್ಥಿತಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಬಂದೊದಗಿದೆ. ದಕ್ಷಿಣ ಕರ್ನಾಟಕದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರೆ, ರಾಗಿ, ಅಲಸಂದೆ, ಜೋಳ, ಶೇಂಗಾ ಬೆಳೆಗಳು ನೆಲಕಚ್ಚಿ ಕೊಳೆತು ಹೋಗ ತೊಡಗಿವೆ’.

‘ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗದ ಸಮಸ್ಯೆ ಕಾಡುತ್ತಿದೆ. ಕೊಳೆ ರೋಗದಿಂದಾಗಿ ಅಡಿಕೆ, ಮೆಣಸು, ಕಾಫಿ ಮುಂತಾದ ಬೆಳೆಗಳು ಮರ ಗಿಡಗಳಲ್ಲಿರುವುದಕ್ಕಿಂತ ನೆಲಕ್ಕೆ ಉದುರಿ ಕೊಳೆತು ಹೋಗಿರುವ ಪ್ರಮಾಣ ಹೆಚ್ಚಾಗಿದೆ. ಬೆಳೆ ಕೈಗೆ ಬರುತ್ತಿರುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ರೈತರನ್ನು ಕಂಗಾಲು ಮಾಡಿದೆ. ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗಗಳಲ್ಲಿ ಬೆಳೆ ಜತೆಗೆ ಸ್ತಿರಾಸ್ತಿಗಳು ಕೂಡ ನಾಶವಾಗಿವೆ. ಮನೆಗಳು ಉದುರಿ ಬಿದ್ದಿರುವ ಜನ-ಜಾನುವಾರುಗಳು ಮರಣ ಹೊಂದಿರುವ, ದವಸ-ಧಾನ್ಯ, ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ದುರಂತದ ಪ್ರಮಾಣ ವಿವರಿಸುತ್ತಿವೆ. ತಗ್ಗಿನ ಪ್ರದೇಶಗಳಲ್ಲಿ ಬೆಳೆ ಜತೆಗೆ ಸ್ತಿರಾಸ್ತಿಯನ್ನು ಕಳೆದುಕೊಂಡ ಬಡ ರೈತರು ಮತ್ತೆ ತಮ್ಮ ಕುಟುಂಬವನ್ನು ಕಟ್ಟಿ ನಿಲ್ಲಿಸಿಕೊಳ್ಳಲು ಐದಾರು ವರ್ಷಗಳೇ ಬೇಕಾಗಬಹುದು. ಪದೇ ಪದೇ ದುರಂತಗಳಿಗೆ ಬಲಿಯಾಗುತ್ತಿರುವ ರೈತರ ನೆರವಿಗೆ ಬರದ ಸರ್ಕಾರ ಅತ್ಯಂತ ಕ್ರೂರಿ ಸರ್ಕಾರ ಎನಿಸಿಕೊಳ್ಳುತ್ತದೆ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಕಳೆದ ವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾಮಳೆಯಿಂದ ಉಂಟಾದ ನಷ್ಟ ಸುಮಾರು ₹ 1 ಲಕ್ಷ ಕೋಟಿಯಾಗಿದ್ದರೂ, ಕೇಂದ್ರ ರಾಜ್ಯ ಸರ್ಕಾರಗಳೆರಡೂ ಜನರಿಗೆ ಬಿಡಿಗಾಸು ನೀಡಿ ಕೈತೊಳೆದುಕೊಂಡವು. ಕಳೆದ ವರ್ಷದ ಅತಿವೃಷ್ಟಿಯಿಂದ ಬಿದ್ದ ಅಸಂಖ್ಯಾತ ಮನೆಗಳಿಗೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 9,000 ಮನೆಗಳಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಸ್ವತ: ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಪರಿಹಾರ ಪಡೆದವರು ಕೂಡ ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ. ಮನೆ ನಿರ್ಮಾಣಕ್ಕೆ ₹ 5 ಲಕ್ಷ ಕೊಡುತ್ತೇವೆ ಎಂದು ಹೇಳಿ ಕೇವಲ ₹ 1 ಲಕ್ಷ ಮಾತ್ರ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲೂ ಕೂಡ ಶೇ 82ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿತ್ತು. ಕೊಚ್ಚಿ ಹೋದ ಹೊಲಕ್ಕೆ ಮತ್ತು ಹಾನಿಯಾದ ಬೆಳೆಗಳಿಗೆ ಸಮರ್ಪಕ ಪರಿಹಾರ ಸಿಗಲಿಲ್ಲ. ಅದರ ಕುರಿತು ಸಮರ್ಪಕವಾದ ಸಮೀಕ್ಷೆಯನ್ನೂ ಮಾಡಲಿಲ್ಲ. ಪರಿಹಾರವನ್ನೂ ನೀಡಲಿಲ್ಲ’

‘ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ತುದಿಗಾಗಲಲ್ಲಿ ನಿಂತಿರುವ ಸರ್ಕಾರಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಖರೀದಿ ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಿ, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿವೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ‘ಈಗಾಗಲೇ ಈ ವರ್ಷ ಯಾವುದೇ ಬೆಳೆಗೆ ಬೆಂಬಲ ಬೆಲೆ ನೀಡುವುದಿಲ್ಲ, ಖರೀದಿ ಕೇಂದ್ರಗಳನ್ನು ತೆರೆಯುವುದಿಲ್ಲ, ಸಂಪನ್ಮೂಲಗಳ ಸಮಸ್ಯೆ ಇದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೀಗೆ ಹೇಳಲು ಕೇಂದ್ರ ಸರ್ಕಾರದ ನಿರ್ದೇಶನವಿದೆಯೇ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ಒಂದು ಕಡೆ ಹೊಲದಲ್ಲಿ ಬೆಳೆ ಕೊಳೆಯುತ್ತಿದೆ. ಮತ್ತೊಂದು ಕಡೆ ಕೊಯಿಲು ಮಾಡಿದ ಫಸಲು ಮಾರುಕಟ್ಟೆಯಲ್ಲಿ ಬಿಡಿಗಾಸಿಗೆ ಮಾರಾಟವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ತನ್ನ ಜವಾಬ್ದಾರಿ ಮರೆತು ವರ್ತಿಸುತ್ತಿರುವುದರಿಂದ ರೈತರು ಭೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಎಪಿಎಂಸಿ ಮಾರುಕಟ್ಟೆಗಳಲ್ಲೇ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೆ, ರೈತರ ಹೊಲಗಳಲ್ಲಿ, ಮನೆಗಳಲ್ಲಿ ಇನ್ನೂ ಕಡಿಮೆ ದರಕ್ಕೆ ಖರೀದಿ ನಡೆಯುತ್ತಿದೆ. ಮೇಲಿನ ಬೆಳೆಗಳ ದರಗಳನ್ನು ನೋಡಿದರೆ ಹಾಕಿದ ಖರ್ಚು ಸಹ ವಾಪಸು ಬರುವಂತೆ ಕಾಣುತ್ತಿಲ್ಲ. ಇದಿನ್ನೂ ಸುಗ್ಗಿಯ ಆರಂಭ ಮಾತ್ರ. ಹೆಚ್ಚಿನ ಪ್ರಮಾಣದ ಉತ್ಪನ್ನ ಮಾರುಕಟ್ಟೆಗೆ ಬರತೊಡಗಿದರೆ ಬೆಲೆ ಇನ್ನೂ ಪಾತಾಳಕ್ಕೆ ತಲುಪುತ್ತದೆ. ಇಂಥ ಪರಿಸ್ಥಿಯಲ್ಲಿ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರ ಬದುಕಿನ ದುರಂತಗಳ ಸರಮಾಲೆ ಆರಭವಾಗುತ್ತವೆ’

‘ಈಗಾಗಲೇ ರಾಜ್ಯ ಸರ್ಕಾರ ಈ ವರ್ಷ ಒಂದರಲ್ಲೇ ₹ 90 ಸಾವಿರ ಕೋಟಿಗಿಂತ ಹೆಚ್ಚು ಸಾಲ ಪಡೆಯಲು ತೀರ್ಮಾನಿಸಿದೆ. ಸರ್ಕಾರಿ ಆಸ್ತಿ-ಪಾಸ್ತಿಗಳನ್ನೂ ಹರಾಜು ಹಾಕುತ್ತಿದೆ. ಆಸ್ತಿಗಳನ್ನು ಹರಾಜು ಹಾಕಿ ಪರಿಸ್ಥಿತಿ ಸುಧಾರಿಸುವ ಅಗತ್ಯವೇನು ಇರಲಿಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ, ತಮಿಳುನಾಡುಗಳ ನಂತರ ರಾಜ್ಯ 3ನೇ ಸ್ಥಾನದಲ್ಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ₹ 6,350 ಕೋಟಿ ಸಂಗ್ರಹವಾಗಿದ್ದರೆ ಈ ವರ್ಷ ₹ 6,050 ಕೋಟಿ ಸಂಗ್ರಹವಾಗಿದೆ. ಆಗಸ್ಟ್ ತಿಂಗಳ ಪರಿಸ್ಥಿತಿಯೂ ಹೀಗೆ ಇದೆ. ಇದಲ್ಲದೇ ಡೀಸೆಲ್, ಪೆಟ್ರೋಲ್ ಮತ್ತು ಮದ್ಯದ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ನಾಡಿನ ರೈತರ, ದುಡಿಯುವ ಸಮುದಾಯಗಳ, ಕುಶಲ ಕರ್ಮಿಗಳ ಬದುಕು ಸುಧಾರಿಸಲು ನೆರವಿಗೆ ಬರುವುದಿಲ್ಲವೆಂದ ಮೇಲೆ ಸರ್ಕಾರ ಸಾಲ ಮಾಡುವುದಾಗಲಿ, ತೆರಿಗೆ ಹೆಚ್ಚಿಸುವುದಾಗಲಿ ಅಮಾನವೀಯವಾಗುತ್ತದೆ. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರವನ್ನು ಪಡೆದುಕೊಳ್ಳಬೇಕಾಗಿರುವುದು ರಾಜ್ಯದ ಸಂವಿಧಾನ ಬದ್ಧವಾದ ಹಕ್ಕು’ ಎಂದೂ ಸಿದ್ದರಾಮಯ್ಯ ಪತ್ರದಲ್ಲಿ ವಿವರಿಸಿದ್ದಾರೆ.

‘ರಾಜ್ಯಕ್ಕೆ ಒಳ್ಳೆಯದಾಗಬಹುದು ಎಂಬ ಭರವಸೆಯಿಂದ 25 ಜನ ಬಿಜಿಪಿ ಸಂಸದರನ್ನು ಆರಿಸಿ ಪಾರ್ಲಿಮೆಂಟಿಗೆ ಕಳುಹಿಸಿದರು. ಇವರಲ್ಲಿ ಅನೇಕರು ದ್ವೇಷಪೂರಿತ ಭಾಷಣ ಮಾಡಿಕೊಂಡು ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸುವ, ರಾಜ್ಯದ ಪರವಾಗಿ ಧ್ವನಿಯೆತ್ತುವ, ಕೆಲಸ ಮಾಡಲಿಲ್ಲ, ಮಾಡುತ್ತಲೂ ಇಲ್ಲ. ರಾಜ್ಯಸಭೆಗೆ ಆಯ್ಕೆಯಾಗಿ ಹೋದ ರಾಜ್ಯಸಭಾ ಸದಸ್ಯರುಗಳಾಗಲಿ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವರಾಗಲಿ ಈ ಕುರಿತು ಉಸಿರೇ ಬಿಡದಿರುವುದು ರಾಜ್ಯದ ಜನರಿಗೆ ಮಾಡಿದ ಭೀಕರ ದ್ರೋಹ. ಇವರೆಲ್ಲರೂ ಸೇರಿ ರಾಜ್ಯವನ್ನು ಅಭಿವೃದ್ಧಿಯ ವಿಚಾರದಲ್ಲಿ ಕತ್ತಲ ಕೂಪಕ್ಕೆ ತಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ’

‘ಕೊರೊನಾ ಕಾರಣದಿಂದ ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ವಲಸೆ ಹೋದ ಜನ ವ್ಯಾಪಕ ಪ್ರಮಾಣದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 20 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆರಂಭದಿಂದಲೂ ಸಮರ್ಪಕವಾಗಿ ಮಳೆ ಬಂದ ಕಾರಣದಿಂದ ಫಸಲು ಸಹ ಚೆನ್ನಾಗಿ ಬಂದಿದೆ. ಆದರೆ, ಬೆಲೆಗಳು ಕುಸಿಯುತ್ತಿವೆ. ಜೊತೆಗೆ ಅತಿವೃಷ್ಟಿ ಹಾನಿ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಂತೂ ತಮಗೆ ನಿಗದಿಯಾಗಿರುವ ಜಿಲ್ಲೆಗಳ ಕಡೆಗೆ ತಲೆ ಹಾಕುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.