ADVERTISEMENT

ಪಕ್ಷ, ಸಮುದಾಯದಲ್ಲಿ ಸಿದ್ದರಾಮಯ್ಯ ಏಕಾಂಗಿ ಆಗಿದ್ದಾರೆ: ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 16:42 IST
Last Updated 12 ಫೆಬ್ರುವರಿ 2021, 16:42 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಮೈಸೂರು: ‘ಸಿದ್ದರಾಮಯ್ಯ ಅವರು ಯಾರ ಯಶಸ್ಸನ್ನೂ ಸಹಿಸುವುದಿಲ್ಲ. ಸಮುದಾಯದ ಸ್ವಾಮೀಜಿಯವರ ಹೋರಾಟವನ್ನೂ ಸಹಿಸುವುದಿಲ್ಲ. ಅವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಅಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ಇದು ಸಿದ್ದರಾಮಯ್ಯ ಹಾಗೂ ಎಚ್‌.ಸಿ.ಮಹದೇವಪ್ಪ ಅವರ ಸ್ವಾರ್ಥದ ಹೋರಾಟವೇ ಹೊರತು ಯಾವ ಅಹಿಂದ ಹೋರಾಟವೂ ಅಲ್ಲ ಎಂದು ಟೀಕಿಸಿದರು.

‘ಕುರುಬ ಸಮಾಜದ ಎಸ್‌ಟಿ ಹೋರಾಟ ಅವರಿಲ್ಲದೇ ಯಶಸ್ವಿಯಾಗಿದೆ. ಕುರುಬ ಸಮುದಾಯ ತಮ್ಮ ಜೊತೆ ಇಲ್ಲ ಎಂದು ಈಗ ಅವರಿಗೆ ಅರಿವಾಗಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದರಾಮಯ್ಯ ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವದ ಬಗ್ಗೆ ಅಭದ್ರತೆ ಕಾಡುತ್ತಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪ ಅವರನ್ನು ನೋಡಿದ ಕೂಡಲೇ ಅವರಿಗೆ ಸಿಎಂ ಮಿಠಾಯಿ ನೆನಪಾಗುತ್ತದೆ. ಅದ‌ನ್ನು ಪಡೆಯುವ ಚಡಪಡಿಕೆ ಅವರಿಗೆ. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ಇವರಿಗೇಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.