ಸಿದ್ದರಾಮಯ್ಯ
ಬೆಂಗಳೂರು: ಅಹವಾಲುಗಳಿಗೆ ಸಚಿವರು ಸ್ಪಂದಿಸುವುದಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುವುದಿಲ್ಲವೆಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸ್ವಪಕ್ಷೀಯ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರದಿಂದ (ಜುಲೈ29) ನಾಲ್ಕು ದಿನ ಸಚಿವರು, ಶಾಸಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ.
ಜಿಲ್ಲಾವಾರು ಶಾಸಕರ ಜೊತೆ ಸಭೆ ನಡೆಸಲಿರುವ ಮುಖ್ಯಮಂತ್ರಿ, ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಜೊತೆಗೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.
ಮೊದಲ ದಿನ ಸಂಜೆ 5 ಗಂಟೆಗೆ ತವರು ಜಿಲ್ಲೆ ಮೈಸೂರಿನ ಶಾಸಕರ ಜೊತೆ ಸಭೆ ಆರಂಭಿಸಲಿರುವ ಮುಖ್ಯಮಂತ್ರಿ, ಬಳಿಕ ಚಾಮರಾಜನಗರ, ತುಮಕೂರು, ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು ಮತ್ತು ಆ ಜಿಲ್ಲೆಗಳ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಸಚಿವರು, ಶಾಸಕರ ಜೊತೆ ಅವರು ಸುಮಾರು 30 ನಿಮಿಷದಿಂದ ಒಂದು ಗಂಟೆ ಮಾತುಕತೆ ನಡೆಸಲಿದ್ದಾರೆ.
ಶಾಸಕರಾದ ಬಿ.ಆರ್. ಪಾಟೀಲ ಮತ್ತು ರಾಜು ಕಾಗೆ ಅವರು ಅಸಮಾಧಾನ ಹೊರಹಾಕಿದ ಬೆನ್ನಲ್ಲೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಶಾಸಕರು, ಸಚಿವರ ಜೊತೆ ಸರಣಿ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿದ್ದ ಅವರು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಚಿವರಿಗೆ ಸೂಚನೆ ನೀಡುವ ಜೊತೆಗೆ ಶಾಸಕರ ವಿಶ್ವಾಸ ಗಳಿಸುವಂತೆ ಸಲಹೆ ನೀಡಿದ್ದರು. ಆ ಬೆನ್ನಲ್ಲೆ, ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಹಂಚಿಕೆ ಮಾಡಿದ್ದರು.
ಉಸ್ತುವಾರಿ ಸಚಿವರು ಮತ್ತು ಪಕ್ಷದ ಶಾಸಕರ ಜೊತೆ ಮೊದಲ ಸುತ್ತಿನ ಸಭೆಯ ಬಳಿಕ, ಪ್ರತಿ ಮಂಗಳವಾರ ಶಾಸಕರ ಅಹವಾಲು ಆಲಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಅಂದು ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸದೆ, ಸ್ವಪಕ್ಷೀಯ ಶಾಸಕರ ಜೊತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ದುಃಖ, ದುಮ್ಮಾನ, ಸಮಸ್ಯೆಗಳನ್ನೂ ಆಲಿಸಲು ಅವರು ತೀರ್ಮಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.