ADVERTISEMENT

ಜನ ಸಿದ್ದರಾಮಯ್ಯನವರ ಲುಂಗಿ ಬಿಚ್ಚುವ ಕಾಲ ದೂರವಿಲ್ಲ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:21 IST
Last Updated 22 ಏಪ್ರಿಲ್ 2025, 15:21 IST
   

ಕೊಪ್ಪಳ: ‘ಉಡದಾರ, ಜನಿವಾರ ಹಾಗೂ ತಾಳಿ ಬಿಚ್ಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲುಂಗಿಯನ್ನು ರಾಜ್ಯದ ಜನ ಬಿಚ್ಚುವ ಕಾಲ ದೂರವಿಲ್ಲ. ಇದಕ್ಕಾಗಿ ಕಾಯುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ‘ಮುಖ್ಯಮಂತ್ರಿಯಂಥ ಘನತೆಯ ಸ್ಥಾನದಲ್ಲಿರುವವರು ಯಾವತ್ತೂ ಸುಳ್ಳು ಹೇಳಬಾರದು. ಆದರೆ ಸಿದ್ದರಾಮಯ್ಯ ನಿರಂತರವಾಗಿ ಸುಳ್ಳು ಹೇಳಿಯೇ ಆಡಳಿತ ನಡೆಸುತ್ತಿದ್ದಾರೆ. ಬಿ.ಆರ್‌. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಸಾವರ್ಕರ್ ಎಂದು ಅವರು ಸಾಬೀತು ಮಾಡಿದರೆ ಈಗಿರುವ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಸಾಬೀತು ಮಾಡಲು ಆಗದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಾರೆಯೇ’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ನಲ್ಲಿ ಇರುವವರು ನಕಲಿ ಗಾಂಧಿಗಳು. ಸುಳ್ಳು ಹೇಳುವುದರಲ್ಲಿ ಖರ್ಗೆ ಕುಟುಂಬದವರು ನಿಸ್ಸೀಮರು. ಮಲ್ಲಿಕಾರ್ಜುನ ಖರ್ಗೆ ರಬ್ಬರ್‌ ಸ್ಟಾಂಪ್‌ನಂತಿದ್ದಾರೆ. ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದಲ್ಲಿ ಶೇ. 60ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವಿದ್ದಾಗ ಶೇ. 40ರಷ್ಟು ಎಂದು ಆರೋಪಿಸಲಾಗಿತ್ತು. ರಾಜ್ಯ ಸರ್ಕಾರ ಈ ಎರಡೂ ವಿಷಯವನ್ನು ಸಿಬಿಐ ತನಿಖೆಗೆ ಕೊಡಲಿ’ ಎಂದು ಆಗ್ರಹಿಸಿದರು.

ADVERTISEMENT

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಎದುರೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ’ನಮ್ಮ ಪಕ್ಷದ ಹಾಲಿ, ಮಾಜಿ ಶಾಸಕರು ಮೈ ಚಳಿ ಬಿಟ್ಟು ಹೋರಾಟ ಮಾಡಬೇಕು. ಆಡಳಿತ ಪಕ್ಷದ ಶಾಸಕರು ನಿಮ್ಮ ಕ್ಷೇತ್ರಕ್ಕೆ ಅನುದಾನ ತಂದುಕೊಡುತ್ತಾರೆ ಎನ್ನುವ ಭ್ರಮಾಲೋಕದಲ್ಲಿ ಇರಬಾರದು. ಬೀದಿಗಿಳಿದು ದಿಟ್ಟ ಹೋರಾಟ ಮಾಡಿದರಷ್ಟೇ ಅಧಿಕಾರ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.