ADVERTISEMENT

ಸಾಮೂಹಿಕ ಅತ್ಯಾಚಾರ ಘಟನೆ: ಯೋಗಿ ಆದಿತ್ಯನಾಥ ಕಾವಿಧಾರಿಗಳ ಕಳಂಕ ಎಂದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 7:07 IST
Last Updated 30 ಸೆಪ್ಟೆಂಬರ್ 2020, 7:07 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಎರಡು ವಾರಗಳ ಹಿಂದೆಯಷ್ಟೇ ಅತ್ಯಾಚಾರಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಉತ್ತರ ಪ್ರದೇಶದ ಯುವತಿಯ ಅಂತ್ಯ ಸಂಸ್ಕಾರವನ್ನು ಉತ್ತರ ಪ್ರದೇಶದ ಪೊಲೀಸರು ಒತ್ತಾಯಪೂರ್ವಕವಾಗಿ ಮಾಡಿರುವುದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅರು ಹೊರಬೇಕಾಗುತ್ತದೆ. ಅಲ್ಲದೆ ಅವರನ್ನು ಬೆಂಬಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಸ್ತ ಸಂಘ ಪರಿವಾರ ಕೂಡಾ ಹೊರಬೇಕಾಗುತ್ತದೆ. ತಕ್ಷಣ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕಿ ಉತ್ತರಪ್ರದೇಶವನ್ನು ರಕ್ಷಿಸಿ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಯೋಗಿ ಆದಿತ್ಯನಾಥ ಅವರು ಕಾವಿಧಾರಿಗಳ ಪಾಲಿನ ಕಳಂಕ. ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ. ಮೊದಲು ಇವರನ್ನು ವಜಾ ಮಾಡಿ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.