ADVERTISEMENT

ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ: ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಿಎಂ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2026, 16:54 IST
Last Updated 3 ಮಾರ್ಚ್ 2026, 16:54 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ತಾ ಕಳ್ಳ ಇತರರ ನಂಬ” ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಮುಳ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್‌ ಮೂಲಕ ಕಿಡಿಕಾರಿದ್ದಾರೆ..

‘ಡಿ.ಕೆ.ಶಿ ಮತ್ತು ನನ್ನದು ಹಾಲು-ಜೇನಿನ ಸಂಬಂಧ’

ADVERTISEMENT

ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ. ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಆರ್.ಅಶೋಕ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿದಿರಲಿ ಎಂದು ಕುಟುಕಿದ್ದಾರೆ.

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಧಾನಿ ಎದುರು ಬಾಯಿ ಬಿಡಲಾಗದೆ ಕೈಕಾಲು ನಡುಗುವಂತಹ ಸ‍್ಥಿತಿ ಇರುವ ಬಿಜೆಪಿಯೂ ಅಲ್ಲ, ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಕೂಡಾ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ, ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯಗಳು ಅವರಿಗೆ ಇದೆ. ಆದರೆ, ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಅವರನ್ನೂ ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು. ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ ಎಂದಿದ್ದಾರೆ.

‘ತಮ್ಮ ಕುತಂತ್ರ ಬುದ್ದಿಯಿಂದಲೇ ದೇವೇಗೌಡರು ಪ್ರಧಾನಿ ಹುದ್ದೆ ಕಳೆದುಕೊಂಡಿದ್ದು’

ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಫೋನ್ ಕದ್ದಾಲಿಕೆಯಂತಹ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಢಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎನ್ನುವುದು ವಿಷಾದನೀಯ ವಾಸ್ತವ ಎಂದು ಹೇಳಿದ್ದಾರೆ.

‘ನಿರ್ಮಲಾನಂದ ಸ್ವಾಮೀಜಿಯ ಫೋನ್‌ ಕದ್ದಾಲಿಸಿದ ಕುಖ್ಯಾತಿ ಎಚ್.ಡಿ.ಕೆ ಯದ್ದು’

2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್‌ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.