ADVERTISEMENT

ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ಕೇಳೋಕೆ: ಸಿದ್ದರಾಮಯ್ಯ

ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮತ್ತೊಮ್ಮೆ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:15 IST
Last Updated 28 ಡಿಸೆಂಬರ್ 2020, 20:15 IST
ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಲೀಂ ಅಹಮದ್‌, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಜಿ. ಪರಮೇಶ್ವರ ಇದ್ದರು ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಲೀಂ ಅಹಮದ್‌, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಜಿ. ಪರಮೇಶ್ವರ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾನು ದನದ ಮಾಂಸ ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು. ಬೇಡ ಎನ್ನಲು ನೀನು ಯಾರು' ಎಂದು ಅಧಿವೇಶನದಲ್ಲಿಯೇ ಕೇಳಿದ್ದೇನೆ. ನಮ್ಮವರು ಇದನ್ನು ಗಟ್ಟಿಯಾಗಿ ಹೇಳುವುದಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ‘ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆ’ಯಲ್ಲಿ ಅವರು, ‘ನಾನು ಸಿದ್ಧಾಂತಕ್ಕೆ ಬದ್ಧ. ನಂಬಿರುವ ಸಿದ್ಧಾಂತಗಳನ್ನುನಾವು ಗಟ್ಟಿಯಾಗಿ ಹೇಳಬೇಕು. ಕಾಂಗ್ರೆಸ್‍ಗೆ ಹಿನ್ನಡೆಯಾದರೆ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಹಿನ್ನಡೆ ಆದಂತೆ’ ಎಂದರು.

‘ನಾನು ದನದ ಮಾಂಸ ತಿನ್ನುತ್ತೇನೆ. ನೀನು ಯಾವನಯ್ಯ ಕೇಳೋಕೆ. ನೀನೂ ತಿನ್ನು ಎಂದು ಬಲವಂತ ಮಾಡಲ್ಲ. ನನ್ನ ಆಹಾರ ನನ್ನ ಇಷ್ಟ ಎನ್ನಲು ಹೆಚ್ಚು ಧೈರ್ಯ ಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್‍ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ಇದೆ. ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಪಕ್ಷದ ಬಗ್ಗೆ ಮಾತನಾಡಿದರೆ ಸಹಿಸಲಾರೆ’
‘ರೈತರ ಹೋರಾಟದಲ್ಲಿ ನಾನು ಹಸಿರು ಶಾಲು ಹಾಕಿದ್ದನ್ನು ಉಲ್ಲೇಖಿಸಿ, ಕಾಂಗ್ರೆಸ್ ಶಾಲಿಗೆ ಶಕ್ತಿ ಇಲ್ಲವೆಂದು ಹಸಿರು ಶಾಲು ಹಾಕಿದ್ದಾರೆ’ ಎಂದು ಹೇಳಿದ್ದ ಎಚ್‌.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ನಿಮ್ಮ ತಂದೆಯವರನ್ನು ಪ್ರಧಾನಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು. ನಿಮ್ಮನ್ನು ಸಿ.ಎಂ ಮಾಡಿದ್ದೂ ಇದೇ ಶಾಲು. ವೈಯಕ್ತಿಕವಾಗಿ ನಿಂದಿಸಿದರೆ ಸಹಿಸಬಹುದು. ಪಕ್ಷದ ನಿಂದನೆ ಸಹಿಸಲಾರೆ’ ಎಂದರು.

‘ಜ.6ರಿಂದ 18ರವರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಚುನಾವಣೆಯಲ್ಲಿ ಸೋತವರು, ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆ ಮಂಗಳೂರು, ಬಿಡದಿ, ಕಲಬುರ್ಗಿ, ಹುಬ್ಬಳ್ಳಿ- ಧಾರವಾಡದಲ್ಲಿ ನಡೆಯಲಿದೆ. ಬೂತ್ ಮಟ್ಟದ ಸಮಿತಿ ರಚಿಸಲು ಪ್ರಜಾ ಪ್ರತಿನಿಧಿ ಆ್ಯಪ್ ಸಿದ್ಧಪಡಿಸಿದ್ದೇನೆ. ಜ.30ರ ಒಳಗೆ ಪಂಚಾಯಿತಿ, ವಾರ್ಡ್‌ ಸಮಿತಿ ರಚಿಸುತ್ತೇವೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.