ADVERTISEMENT

ರಾಜ್ಯದಲ್ಲಿ ಆಡಳಿತ ಯಂತ್ರವೇ ಇಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:54 IST
Last Updated 27 ಡಿಸೆಂಬರ್ 2021, 15:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಯಂತ್ರವೇ ಇಲ್ಲ. ಇಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆಡಳಿತ ಯಂತ್ರ ನಿಷ್ಕ್ರಿಯಗೊಂಡಿದೆ. ವರ್ಗಾವಣೆಗೆ ಲಂಚ ಕೊಟ್ಟು ಅಧಿಕಾರಿಗಳಿಗೆ ಸಾಕಾಗಿದೆ. ಈ ಸರ್ಕಾರ ತೊಲಗಬೇಕು ಎಂದು ಅಧಿಕಾರಿಗಳು ಬಯಸುತ್ತಿದ್ದಾರೆ. ಜನರ ಆಶಯವೂ ಅದೇ ಆಗಿದೆ’ ಎಂದರು.

ಕಾಂಗ್ರೆಸ್‌ ಪಕ್ಷವು ಮೇಕೆದಾಟುವಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ರಾತ್ರಿ ಕರ್ಫ್ಯೂ ಜಾರಿಯಿಂದ ತೊಂದರೆ ಆಗುವುದಿಲ್ಲ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ಪಾದಯಾತ್ರೆ ನಡೆಸಲಾಗುವುದು. ಕೋವಿಡ್‌ ‌ನೆಪವೊಡ್ಡಿ ಪಾದಯಾತ್ರೆ ತಡೆಯಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ADVERTISEMENT

ಕೋವಿಡ್‌ ಇರುವಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈಗ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೊಂದು ಕಾನೂನು, ಕಾಂಗ್ರೆಸ್‌ ಪಕ್ಷಕ್ಕೆ ಒಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ನಿರುದ್ಯೋಗ, ಭ್ರಷ್ಟಾಚಾರ, ಹಸಿವು, ಬಡತನದಂತಹ ಜ್ವಲಂತ ಸಮಸ್ಯೆಗಳಿಂದ ಜನರ ದಿಕ್ಕು ತಪ್ಪಿಸಲು ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆ ತಂದಿದೆ. ಆರ್‌ಎಸ್‌ಎಸ್‌ ಕಾರ್ಯಸೂಚಿಯಂತೆ ಇದು ನಡೆದಿದೆ. ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ, ಸಚಿವ ಕೆ.ಎಸ್‌. ಈಶ್ವರಪ್ಪ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲವರ ಮನವಿಯಂತೆ ಮತಾಂತರ ನಿಷೇಧ ಮಸೂದೆ ಕರಡು ಸಿದ್ಧಪಡಿಸಿದ್ದ ಕಾನೂನು ಆಯೋಗದ ಅಂದಿನ ಅಧ್ಯಕ್ಷ ಮಳೀಮಠ ಅವರು ಸರ್ಕಾರಕ್ಕೆ ಕಳುಹಿಸಿದ್ದರು. ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮೊದಲು ನಾನು ಸೂಚಿಸಿದ್ದು ನಿಜ. ನಂತರ ಅದನ್ನು ತಿರಸ್ಕರಿಸುವಂತೆ ಆಗಿನ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರಿಗೆ ಸೂಚಿಸಿದ್ದೆ. ಅವರು ಮಸೂದೆಯ ಕರಡನ್ನು ತಿರಸ್ಕರಿಸಿದ್ದರು. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.