ADVERTISEMENT

ಓಲೈಕೆ ರಾಜಕಾರಣ ಬೇಡ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮೈಸೂರು: ‘ಯಾರನ್ನೋ ಓಲೈಸಿ, ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ, ಅಕ್ಷಮ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಮಾತನಾಡಿ ಸಭಿಕರನ್ನು ಹಿಡಿದಿಟ್ಟ ಅವರು, ಸಂವಿಧಾನದ ಜಾತ್ಯತೀತ, ಧರ್ಮಾತೀತ ಮೌಲ್ಯ ಪ್ರತಿಪಾದನೆಯನ್ನು ಒತ್ತಿ ಹೇಳಿದರು.

ADVERTISEMENT

‘ರಾಜಕಾರಣ ಮಾಡಲು ಬೇರೆ ಸ್ಥಳ,‌ ಸಂದರ್ಭಗಳಿವೆ.‌ ಗೋಡಾ ಹೈ,‌ ಮೈದಾನ್ ಹೈ. ಚುನಾವಣೆಯಲ್ಲಿ ರಾಜಕಾರಣ ಮಾಡಬೇಕೇ ಹೊರತು, ದಸರೆಯಂಥ ಉತ್ಸವದಲ್ಲಿ ಅಲ್ಲ’. ‘ಬಾನು ಮುಷ್ತಾಕ್‌ ಅವರು ದಸರೆ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ’ ಮತ್ತೊಮ್ಮೆ
ಸಮರ್ಥಿಸಿಕೊಂಡರು.

ಬಾನು ಅವರ ಕತೆಗಳ ಅನುವಾದಕಿ ದೀಪಾ ಭಾಸ್ತಿಯವರನ್ನೂ ಸ್ಮರಿಸಿದರು. ಜೈ ಭಾರತ್‌, ಜೈ ಕರ್ನಾಟಕದ ಜೊತೆ ಜೈ ಸಂವಿಧಾನ ಎಂದು ಘೋಷಣೆ ಕೂಗಿದರು.

ಎಲ್ಲ ಕಡೆ ಪೊಲೀಸರು: ಅಘೋಷಿತ ನಿಷೇಧಾಜ್ಞೆ

ಬಾನು ಮುಷ್ತಾಕ್‌ ಅವರ ಆಯ್ಕೆ ಖಂಡಿಸಿ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಯ ನಾಯಕರು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳಿಕೆ ನೀಡಿದ್ದರಿಂದ, ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ‌ ನಗರದ ಎಲ್ಲ‌ ರಸ್ತೆ, ವೃತ್ತಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಲ್ಲಿಯೂ ಗುಂಪು ಸೇರಲು ಜನರಿಗೆ ಪೊಲೀಸರು‌ ಅವಕಾಶ ನೀಡಲಿಲ್ಲ. ‌

ನೂರಾರು ಪೊಲೀಸರು ಬಾನು ಅವರಿಗೆ ರಕ್ಷಣೆ ನೀಡಿ ಬೆಟ್ಟಕ್ಕೆ ಕರೆತಂದರು. ಅವರ ಕುಟುಂಬಸ್ಥರಿಗೆಂದೇ ಪ್ರತ್ಯೇಕ‌ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಬೆಟ್ಟದ ಮೇಲೆ ಉದ್ಘಾಟನೆ‌ ಕಾರ್ಯಕ್ರಮದ ವೇದಿಕೆ ಒಳ, ಹೊರಗೂ ಪೊಲೀಸರ ಕಣ್ಗಾವಲು ಹೆಚ್ಚಿತ್ತು. ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ನಿವಾಸಿಗಳಿಗೆ ಮನೆಯಿಂದ ಹೊರ ಬರಲು ಅವಕಾಶ ನೀಡಿರಲಿಲ್ಲ.

ಪಾಸ್ ಇದ್ದ ಸಾರ್ವಜನಿಕರಿಗಷ್ಟೇ ಪ್ರವೇಶವಿದ್ದು, ಅವರನ್ನು ತಪಾಸಣೆ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯಿಂದ ಮೂರು ಹಂತದ ಬಿಗಿ ತಪಾಸಣೆ ಮಾಡಲಾಯಿತು. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.