ADVERTISEMENT

ದೇಶದ ಆತ್ಮ ಅಳಿಸಲು ಅವಕಾಶ ನೀಡಲ್ಲ: ಸಿಡಬ್ಲ್ಯುಸಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 15:30 IST
Last Updated 24 ಸೆಪ್ಟೆಂಬರ್ 2025, 15:30 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

ಬೆಂಗಳೂರು: ‘ಈ ದೇಶದ ಆತ್ಮವನ್ನು ಅಳಿಸಿ ಹಾಕಲು ಬಿಜೆಪಿ- ಆರ್‌ಎಸ್‌ಎಸ್‌ ಒಕ್ಕೂಟ ಬಯಸಿದೆ. ಆದರೆ, ನಾವು (ಕಾಂಗ್ರೆಸ್) ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ನಾದಲ್ಲಿ ಬುಧವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಮಾತನಾಡಿದ ಅವರು, ‘ನಾವು ಕೇವಲ ಚುನಾವಣೆಗಾಗಿ ಹೋರಾಡುತ್ತಿಲ್ಲ, ಭಾರತವನ್ನು ಉಳಿಸಲು ಹೋರಾಡುತ್ತಿದ್ದೇವೆ’ ಎಂದರು.

ADVERTISEMENT

‘ಕರ್ನಾಟಕದಲ್ಲಿ ನಾವು ಮೊದಲು ಜಾರಿಗೆ ತಂದ ‘ಗ್ಯಾರಂಟಿ’ ಯೋಜನೆಗಳನ್ನು ಬಿಜೆಪಿ ಆಡಳಿತದ ರಾಜ್ಯಗಳು ಕೂಡ ನಿರ್ಲಜ್ಜವಾಗಿ ನಕಲು ಮಾಡುತ್ತಿರುವುದನ್ನು ನಾವು ಮರೆಯಬಾರದು. ಹಿಂದೆ ನಮ್ಮನ್ನು ಅಪಹಾಸ್ಯ ಮಾಡಿದವರು, ಇಂದು ನಮ್ಮ ಅನುಕರಿಸುತ್ತಿದ್ದಾರೆ. ಜನರು ನಮ್ಮ ಆಡಳಿತದ ಮಾದರಿಯನ್ನು ನಂಬುತ್ತಾರೆ ಎಂಬುದು ಅವರಿಗೆ ತಿಳಿದಿದೆ’ ಎಂದರು.

‘ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ನ್ಯಾಯವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹತ್ತಿಕ್ಕುತ್ತಿದೆ. ಭಾರತವು ಇಂದು ಆತ್ಮವಂಚನೆಯ ನೆರಳಿನಲ್ಲಿ ಬದುಕುತ್ತಿದೆ. ಸಂಸ್ಥೆಗಳನ್ನು ವಶಪಡಿಸಿಕೊಂಡು ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗುತ್ತಿದ್ದು, ಜನಾದೇಶವನ್ನು ಕದಿಯಲಾಗುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿಯು ದೇಶದಾದ್ಯಂತ ‘ಮತ ಕಳವು‘ ಕೃತ್ಯದಲ್ಲಿ ತೊಡಗಿದೆ. ಶಾಸಕರನ್ನು ಖರೀದಿಸುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಬಿಜೆಪಿಯವರ ಕೆಲಸ. ಬಿಹಾರದಲ್ಲಿ ಮತದಾರರ ಪಟ್ಟಿಯ ‘ಎಸ್‌ಐಆರ್’ (ವಿಶೇಷ ಸಮಗ್ರ ಪರಿಷ್ಕರಣೆ) ದುರಂತವು ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದರು.

‘ಮೋದಿ ಸರ್ಕಾರವು ವಿದೇಶಾಂಗ ನೀತಿಯಲ್ಲಿ ವಿಫಲವಾಗಿದೆ. ಒಮ್ಮೆ ಜಾಗತಿಕವಾಗಿ ಗೌರವಿಸಲ್ಪಟ್ಟ ಭಾರತದ ವಿದೇಶಾಂಗ ನೀತಿ, ಇಂದು ಮೌನ ಮತ್ತು ಅಧೀನ ಸ್ಥಿತಿಗೆ ಕುಸಿದಿದೆ. ಕಾಶ್ಮೀರದಲ್ಲಿ ಶಾಂತಿ ನೆಲಸುವಂತೆ ನಾನು ಮಾಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಚಿಕೆಯಿಲ್ಲದೆ ಹೇಳಿಕೊಂಡಾಗ, ಮೋದಿ ಒಂದೂ ಮಾತೂ ಆಡಲಿಲ್ಲ. ಇದು ರಾಜತಾಂತ್ರಿಕತೆ ಅಲ್ಲ.ಇದು ನಮ್ಮ ಸಾರ್ವಭೌಮತ್ವದೊಂದಿಗೆ ಮಾಡಿಕೊಂಡ ರಾಜಿ’ ಎಂದೂ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.