ADVERTISEMENT

ಸುಸಜ್ಜಿತ ಆಸ್ಪತ್ರೆಗಾಗಿ ಉತ್ತರ ಕನ್ನಡ ಜನತೆಯ ಹೋರಾಟಕ್ಕೆ ಬೆಂಬಲ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2022, 14:39 IST
Last Updated 24 ಜುಲೈ 2022, 14:39 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಸುಸಜ್ಜಿತ ಆಸ್ಪತ್ರೆಗಾಗಿ ಉತ್ತರ ಕನ್ನಡ ಜನತೆ ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಘೋಷಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಹೊನ್ನಾವರದಿಂದ ಉಡುಪಿ ಜಿಲ್ಲೆಗೆ ರೋಗಿಗಳನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌, ಬೈಂದೂರು ತಾಲ್ಲೂಕಿನ ಶಿರೂರು ಟೋಲ್ ಗೇಟ್‌ ಬಳಿ ಕಳೆದ ಬುಧವಾರ ಭೀಕರ ಅಪಘಾತಕ್ಕೀಡಾಗಿದ್ದು, ನಾಲ್ವರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕೆಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬೇಡಿಕೆಗೆ ಎರಡನೇ ಬಾರಿಗೆ ಅಭಿಯಾನದ ಸ್ವರೂಪ ಕೊಟ್ಟಿದ್ದು, #WeNeedEmergencyHospitalInUttaraKannada ಹ್ಯಾಷ್‌ಟ್ಯಾಗ್‌ನೊಂದಿಗೆ ಇಂದು (ಜುಲೈ 24) ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಟ್ವೀಟ್ ಮಾಡುವಂತೆ ಕರೆ ಕೊಟ್ಟಿದ್ದರು. ಇದಕ್ಕೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.