ADVERTISEMENT

ಸಚಿವರ ನಡುವಿನ ಕಿತ್ತಾಟದಿಂದ ಕೊರೊನಾ ಸೋಂಕು ಉಲ್ಬಣ: ಸಿದ್ದರಾಮಯ್ಯ ಸರಣಿ ಟ್ವೀಟ್

​ಪ್ರಜಾವಾಣಿ ವಾರ್ತೆ
Published 5 ಮೇ 2020, 9:54 IST
Last Updated 5 ಮೇ 2020, 9:54 IST
   

ಬೆಂಗಳೂರು: ‘ಸಚಿವರ ನಡುವಿನ ತಿಕ್ಕಾಟ, ಪಕ್ಷದೊಳಗಿನ ಹಸ್ತಕ್ಷೇಪ, ಪರಿವಾರದ ಕಾರ್ಯಕರ್ತರ ಪೊಲೀಸ್‌ ಗಿರಿ ಮತ್ತು ಸರ್ಕಾರದ ಟಯಲ್‌ ಅಂಟ್‌ ಎರರ್‌ ನೀತಿಯಿಂದ ಕೊರೊನಾ ವೈರಸ್‌ ಮಿತಿ ಮೀರಿ ಉಲ್ಬಣಿಸುತ್ತಿದೆ’ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾಡಿದ ತಪ್ಪುನ್ನು ತಿದ್ದಿಕೊಳ್ಳದೆ ಹಳೆ ತಪ್ಪನ್ನು ಸರಿಪಡಿಸಲು ಹೊಸ ತಪ್ಪು ಮಾಡುತ್ತಿದ್ದಾರೆ ಟೀಕಿಸಿದ್ದಾರೆ.

ವೈಜ್ಞಾನಿಕ ಮಾನದಂಡಗಳಿಲ್ಲದೆ ಜಿಲ್ಲೆಗಳನ್ನು ಕೆಂಪು / ಕಿತ್ತಳೆ / ಹಸಿರು ವಲಯಗಳಾಗಿ ಮಾಡಿರುವುದು ಬಾಲಿಶತನ. ಹೆಚ್ಚು ಸೋಂಕು ಪ್ರಕರಣಗಳ ಜಿಲ್ಲೆಗಳನ್ನು ಕೈಬಿಟ್ಟು ಕೆಂಪಿನಿಂದ ಕಿತ್ತಳೆ ವಲಯಕ್ಕೆ ಸೇರಿಸಲಾಗಿದೆ. ಈ ವಿಂಗಡಣೆಗೆ ಮಾನದಂಡಗಳೇನು ಎಂಬುದನ್ನು ಯಡಿಯೂರಪ್ಪನವರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಲಾಕ್‌ಡೌನ್‌ ಹೇರುವ ಮೊದಲು ಬೆಂಗಳೂರು ನಗರದಿಂದ ಜನರನ್ನು ತೆರಳದಂತೆ ಸೂಚಿಸಿ, ನಂತರ ನಿರ್ಧಾರ ಬದಲಿಸಿ ತೆರಳಲು ಅವಕಾಶ ನೀಡಿದ್ದು ಬಸ್ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಜನದಟ್ಟಣೆಗೆ ಕಾರಣವಾಗಿತ್ತು. ಜಿಲ್ಲೆಗಳಿಗೆ ಸೋಂಕು ಹರಡಲು ಇದು ಪ್ರಮುಖ ಕಾರಣ. ಆ ತಪ್ಪು ಮರುಕಳಿಸುತ್ತಿದೆ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಹೇಳಿದ ಯಡಿಯೂರಪ್ಪನವರು, ಒಮ್ಮೆ ದುಪ್ಪಟ್ಟು, ನಂತರ ಏಕಮುಖ ಬಸ್‌ ದರ ವಿಧಿಸಿ, ನಂತರ ನಮ್ಮ ಒತ್ತಡದಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದಾರೆ. ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಅವಸರದ ನಿರ್ಧಾರದಿಂದ ಬಡಪಾಯಿ ಜನ ಸತ್ತು ಬದುಕಿದ ಸ್ಥಿತಿಯಲ್ಲಿ ಊರಿಗೆ ತೆರಳಿದ್ದಾರೆ.

ಊರಿಗೆ ತೆರಳಲು ಸಾವು-ಬದುಕಿನ ಹೋರಾಟ ನಡೆಸಿದ್ದ ವಲಸೆ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಸ್ಥಿತಿಯಲ್ಲಿರಲಿಲ್ಲ. ಜಿಲ್ಲೆಗಳಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿ ಕಡ್ಡಾಯವಾಗಿ ಕ್ವಾರಂಟೈನ್ ಗೊಳಪಡಿಸುವಂತೆ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ತಕ್ಷಣ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮದ್ಯದಂಗಡಿ ತೆರೆದದ್ದು ಸಿಎಂ ಯಡಿಯೂರಪ್ಪನವರ ಅವಸರದ ಮತ್ತು ಪೂರ್ವ ಸಿದ್ದತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಕೊರೊನಾ ಸೋಂಕು ಉಲ್ಬಣಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದ್ದು, ಪ್ರಮುಖ ಖಾತೆಗಳಿಗಾಗಿ ಸಚಿವರ ನಡುವೆ ಬಹಿರಂಗವಾಗಿ ಸಂಘರ್ಷ ನಡೆಯುತ್ತಿದೆ. ಯಡಿಯೂರಪ್ಪನವರಿಗೆ ಸಚಿವರ ಮೇಲೆ ನಿಯಂತ್ರಣವಿಲ್ಲ. ಇದರಿಂದಾಗಿ ಪ್ರತಿಬಾರಿ ಸರ್ಕಾರದ ನಿರ್ಧಾರ ಬದಲಾಗುತ್ತಿರುತ್ತದೆ. ಈ ದುರಾಡಳಿತಕ್ಕೆ ಅಮಾಯಕ ಜನತೆ ಬಲಿಯಾಗಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.