ADVERTISEMENT

ಕಾವಿ ಹಾಕಿಕೊಂಡವರನ್ನ ಸಂಶಯದಿಂದ ನೋಡಲು ಬಿಜೆಪಿಯೇ ಕಾರಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 10:36 IST
Last Updated 6 ಮಾರ್ಚ್ 2019, 10:36 IST
   

ಬೆಂಗಳೂರು: ಕಾವಿ ಬಟ್ಟೆ, ನಾಮ, ತಿಲಕದ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಬಿಜೆಪಿಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಕುಂಕುಮ, ನಾಮ, ಕಾವಿ ಬಟ್ಟೆಗಳೆಲ್ಲ‌ ಭಾರತೀಯ ಧಾರ್ಮಿಕ ಪರಂಪರೆಯ ಭಾಗ. ಅದಕ್ಕೊಂದು ಪಾವಿತ್ರ್ಯಇತ್ತು. ಆದರೆ ಯಾವಾಗ ಬಿಜೆಪಿ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ, ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಮುಖ್ಯಮಂತ್ರಿಯೊಬ್ಬರು ಮೈತುಂಬಾ ಕಾವಿ ಬಟ್ಟೆ, ಮುಖ ತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್‌ಗಳಿವೆ ಎಂಬ ವ್ಯಂಗ್ಯದ ಟ್ವೀಟ್ ಮೂಲಕ ಕುಟುಕಿದ್ದಾರೆ.

ADVERTISEMENT

ಬಾದಾಮಿಯ ಕೆಂದೂರ ಕೆರೆಯ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡುವ ಸಮಯದಲ್ಲಿ ನನಗೆ ತಿಲಕ ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ಟ್ವೀಟ್‌ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್‌ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.