ADVERTISEMENT

ಆರ್ಥಿಕ ಸ್ಥಿತಿಯ ಶ್ವೇತಪತ್ರ ಹೊರಡಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:30 IST
Last Updated 13 ಮೇ 2021, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ‘ಬಡವರಿಗೆ ತಕ್ಷಣ ಆಹಾರ ಮತ್ತು ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು. ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಲದ ಬಗ್ಗೆ ಅಂಕಿ-ಅಂಶ ಸಮೇತ ವಿವರಿಸಿರುವ ಅವರು, ‘ಸಾಲದ ವಿಚಾರದಲ್ಲಿ ಬಿಜೆಪಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದೆ. ಹಿಂದಿನ ಮುಖ್ಯಮಂತ್ರಿ ಹೆಚ್ಚು ಸಾಲ ಮಾಡಿಬಿಟ್ಟಿದ್ದರು ಎಂದು ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ ಎಂಬುದರ ಕುರಿತು ಜನರಿಗೆ ಈಗ ಯಾವ ಸಂಶಯವೂ ಉಳಿದಿಲ್ಲ’ ಎಂದು ದೂರಿದ್ದಾರೆ.

‘ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿ, ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಯಾವುದೇ ಆರ್ಥಿಕ ಪ್ಯಾಕೇಜು ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ, ರಾಜ್ಯದ ಜನ ಏನು ಮಾಡಬೇಕು, ಏನು ತಿನ್ನಬೇಕು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಎಚ್ಚೆತ್ತುಕೊಂಡಿಲ್ಲ: ‘ಕೊರೊನಾ ಸೋಂಕು ತ್ವರಿತ ಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆ. ಚಾಮರಾಜನಗರದಲ್ಲಿ ಸಂಭವಿಸಿದ ದುರಂತ 25 ಅಮಾಯಕರನ್ನು ಬಲಿ ತೆಗೆದುಕೊಂಡ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಈಗಿನ ಶೇ 55ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದ ವರದಿಯಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ತಿಂಗಳ ಹಿಂದೆ ಈ ಪ್ರಮಾಣ ಶೇ 30ರಷ್ಟಿತ್ತು. ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲ್ಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆ ಬಲಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಕಳೆದೆರಡು ತಿಂಗಳ ಅವಧಿಯಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳಿದ್ದ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಜನ ಯಾವುದೇ ತಪಾಸಣೆಯಿಲ್ಲದೆ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ಸ್ಥಿತಿ ಬಿಗಡಾಯಿಸಿದ ನಂತರ ಜನ ಹಿಂಡುಗಟ್ಟಿಕೊಂಡು ಜಿಲ್ಲೆಗಳಿಗೆ ತೆರಳಿದ್ದಾರೆ. ಅಂತರರಾಜ್ಯ ಮಾತ್ರವಲ್ಲ ಅಂತರಜಿಲ್ಲಾ ಸಂಚಾರ ನಿರ್ಬಂಧಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.