
ಬೆಂಗಳೂರು: ದಾವಣಗೆರೆಯಲ್ಲಿ ಬುಧವಾರ (ಆಗಸ್ಟ್ 3) ನಡೆಯಲಿರುವ ಸಿದ್ದರಾಮಯ್ಯ–75 ‘ಅಮೃತ ಮಹೋತ್ಸವ’ ಸಂಭ್ರಮಕ್ಕೆ ಅಮೃತ ಮಹೋತ್ಸವ ಸಮಿತಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರಬಹುದೆಂಬ ನಿರೀಕ್ಷೆ ಸಮಿತಿಯದ್ದಾಗಿದೆ.
ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಯ ಜನಪರ ಯೋಜನೆಗಳನ್ನು ನೆನಪಿಸುತ್ತಲೇ, ಕೇಂದ್ರ– ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಿದ್ಧತೆ ನಡೆದಿದೆ. ಕಾರ್ಯಕ್ರಮದ ಅಂತಿಮ ರೂಪರೇಷೆಗಳ ಕುರಿತು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಮಿತಿ ಪದಾಧಿಕಾರಿಗಳಾದ ಆರ್.ವಿ. ದೇಶಪಾಂಡೆ, ಬಸವರಾಜ ರಾಯರಡ್ಡಿ, ಈಶ್ವರ ಖಂಡ್ರೆ, ಎಚ್.ಎಂ. ರೇವಣ್ಣ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಅಜಯ್ ಸಿಂಗ್ ಮತ್ತಿತರರು ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಅವರು ಮಂಗಳವಾರ ಮಧ್ಯಾಹ್ನವೇ ಹುಬ್ಬಳ್ಳಿಗೆ ತೆರಳಲಿದ್ದು, ರಾತ್ರಿ 8 ಗಂಟೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಆಡಳಿತದಲ್ಲಿನ ವೈಫಲ್ಯಗಳ ಕುರಿತು ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ 'ವರುಷ ಎಂಟು ಅವಾಂತರ ನೂರೆಂಟು' ಕಿರು ಹೊತ್ತಿಗೆಯನ್ನು ಮರುಮುದ್ರಿಸಿ ಅಮೃತ ಮಹೋತ್ಸವ ಹಂಚಲು ಸಮಿತಿ ಮುಂದಾಗಿದೆ. ಹೀಗಾಗಿ, ಎರಡು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಮರುಮುದ್ರಿಸಲಾಗಿದೆ’ ಎಂದು ಸಮಿತಿಯ ಮೂಲಗಳು ತಿಳಿಸಿವೆ.
10 ಲಕ್ಷ ಜನರು ಸೇರುವ ನಿರೀಕ್ಷೆ
ದಾವಣಗೆರೆ: ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಕಾರ್ಯಕ್ರಮಕ್ಕೆ ನಗರ ಹೊರವಲಯದ ಕುಂದವಾಡದ ಬಳಿ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಭರದ ಸಿದ್ಧತೆ ನಡೆದಿದೆ.ಅಂದಾಜು 10 ಲಕ್ಷ ಜನ ಬರುವ ನಿರೀಕ್ಷೆ ಇದೆ.
6 ಲಕ್ಷ ಮಂದಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ಶುಭಕೋರುವ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ.
3ರಂದು ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇತರೆ ಮುಖಂಡರು ಪಾಲ್ಗೊಳ್ಳಲಿದ್ದಾರೆ.
250 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಸೇವಾ ರಸ್ತೆಯಲ್ಲೂ ವಾಹನಗಳ ನಿಲುಗಡೆಗೆ ಅವಕಾಶ ಇದೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಗಲೇ ದಾವಣಗೆರೆ, ಹರಿಹರದ ವಸತಿಗೃಹಗಳು ಬಹುತೇಕ ಭರ್ತಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.