ADVERTISEMENT

ಸಿದ್ದೇಶ್ವರ ಶ್ರೀ ಗುಣಮುಖ: ನಾಳೆಯಿಂದ ಪ್ರವಚನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 18:23 IST
Last Updated 4 ಮಾರ್ಚ್ 2022, 18:23 IST
ಸಿದ್ದೇಶ್ವರ ಸ್ವಾಮೀಜಿ
ಸಿದ್ದೇಶ್ವರ ಸ್ವಾಮೀಜಿ   

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಭಕ್ತರ ತೋಟದ ಮನೆಯಲ್ಲಿ ಈಚೆಗೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಬಹುತೇಕ ಗುಣಮುಖರಾಗಿದ್ದಾರೆ.

ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅಲ್ಲಿಯೇ ಅವರು ಒಂದು ತಾಸು ಪ್ರವಚನ ನೀಡಿದ್ದರು.

ಶುಕ್ರವಾರ ಅವರು ನಿಪ್ಪಾಣಿಯ ವಿರೂಪಾಕ್ಷಲಿಂಗ ಸಮಾಧಿ ಮಠಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಈ ಮಠದ ಆವರಣದಲ್ಲಿ ಶ್ರೀಗಳು ಮಾರ್ಚ್‌ 6ರಿಂದ ಬೆಳಿಗ್ಗೆ 6.30ರಿಂದ 7.30ರವರೆಗೆ ಪ್ರವಚನ ನೀಡಲಿದ್ದಾರೆ. ಗಾಯಗೊಂಡ ಘಟನೆಯ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ.

ADVERTISEMENT

ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ‘ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ’ಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೆಂದು ಬಂದಿದ್ದ ಅವರು, ಜ.10ರಂದು ತಮಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಭಕ್ತರೊಬ್ಬರ ತೋಟದ ಮನೆಯಲ್ಲಿ ಜಾರಿ ಬಿದ್ದಿದ್ದರು. ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿತವಾಗಿತ್ತು. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದರು.

ಗಾಯಗೊಂಡಾಗಿನಿಂದಲೂ ಶ್ರೀಗಳು ಕನ್ಹೇರಿ ಮಠದಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.