ADVERTISEMENT

ಕುವೆಂಪುಗೆ ಅಪಮಾನ ಮಾಡಿದ್ದು ಸಿದ್ದರಾಮಯ್ಯ: ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 19:45 IST
Last Updated 15 ಜೂನ್ 2022, 19:45 IST
ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್   

ಶಿವಮೊಗ್ಗ: ‘ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ. ಹೀಗಾಗಿ ಮೊದಲು ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯಲಿ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುವೆಂಪು ಅವರ ನಾಡಗೀತೆ ತಿರುಚಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ. ಅವರುಆಗ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಿರುಚಿದ ನಾಡಗೀತೆಯನ್ನು ‘ಫಾರ್ವರ್ಡ್’ ಮಾಡಿದ್ದ ರೋಹಿತ್ ಚಕ್ರತೀರ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದಕ್ಕೂ ಅವರದ್ದೇ ಸರ್ಕಾರ ‘ಬಿ’ ರಿಪೋರ್ಟ್ ಕೊಟ್ಟಿತ್ತು. ಹೀಗಾಗಿ, ನೈತಿಕತೆ ಇದ್ದರೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ ಮಾತಾಡಲಿ’ ಎಂದು ಸವಾಲು ಹಾಕಿದರು.

‘ಕುವೆಂಪು ವಿರಚಿತ ರಾಮಾಯಣ ದರ್ಶನಂ ಕೃತಿಯಲ್ಲಿನ ಪಾಠ ತೆಗೆದು ಹಾಕಿ ಅವಮಾನ ಮಾಡಿದ್ದು ಅವರೇ (ಸಿದ್ದರಾಮಯ್ಯ). ಬರಗೂರು ರಾಮಚಂದ್ರಪ್ಪ ಸಮಿತಿಯ ಅವಧಿಯ ಪರಿಷ್ಕರಣೆ ವಿಚಾರವನ್ನು ನಾವು ಸಾರ್ವಜನಿಕರೆದುರು ‍ಪ್ರಸ್ತಾಪಿಸುತ್ತೇವೆ ಎಂದಾಗ ಬೇಡದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವೈಚಾರಿಕವಾಗಿ ಮಾತನಾಡಲು ಏನೂ ಇಲ್ಲ. ಹಾಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಶೇ 74ರಷ್ಟು ಪಠ್ಯಪುಸ್ತಕ ವಿತರಣೆ ಪೂರ್ಣ’

‘ಈಗಾಗಲೇ ಶೇ 86ರಷ್ಟು ಪರಿಷ್ಕೃತ ಪಠಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಶೇ 74ರಷ್ಟು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

‘ಈ ವರ್ಷ ಪಠ್ಯಪುಸ್ತಕ ತ್ವರಿತ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಕ್ರೇನ್– ರಷ್ಯಾ ನಡುವೆ ಯುದ್ಧ ನಡೆಯದಿದ್ದರೆ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಲಭ್ಯವಾಗುತ್ತಿತ್ತು. ಮುದ್ರಣ ಕಾಗದದ ಅಲಭ್ಯತೆಯಿಂದ ವಿಳಂಬವಾಯಿತು. ಇನ್ನುಳಿದ ಶೇ 26ರಷ್ಟು ಪಠ್ಯಪುಸ್ತಕಗಳ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.