ADVERTISEMENT

ಸಿಗಂದೂರು ಸೇತುವೆ: ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ನಿತಿನ್ ಗಡ್ಕರಿ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2025, 9:51 IST
Last Updated 14 ಜುಲೈ 2025, 9:51 IST
   

ನವದೆಹಲಿ: ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಖುದ್ದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಭಾಗಿಯಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿಸಲಾಗಿತ್ತು ಎಂದಿದ್ದಾರೆ.

‘ಸೇತುವೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ಅಧಿಕೃತ ಆಹ್ವಾನ ನೀಡಲಾಗಿತ್ತು. ಖುದ್ದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ವರ್ಚುವಲ್‌ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಜುಲೈ 12ರಂದು ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿತ್ತು’ ಎಂದು ಗಡ್ಕರಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರ ಯಾವುದೇ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ. ಕರ್ನಾಟಕ ಸರ್ಕಾರದ ಸಹಕಾರವನ್ನು ಕೇಂದ್ರವು ನಿರಂತರವಾಗಿ ಶ್ಲಾಘಿಸುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲಾ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರವು ಬದ್ಧವಾಗಿದೆ’ ಎಂದಿದ್ದಾರೆ.

ADVERTISEMENT

ಬಿರು ಮಳೆಯ ನಡುವೆಯೇ ಇಂದು(ಜುಲೈ 14) ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಲೋಕಾರ್ಪಣೆ ಮಾಡಿದರು.

ಸಿದ್ದರಾಮಯ್ಯ ಹೇಳಿದ್ದೇನು?

ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದರು. ಸಾಧ್ಯವಾದರೆ ಕಾರ್ಯಕ್ರಮವನ್ನು ಮುಂದೂಡುವಂತೆಯೂ ಕೇಳಿಕೊಂಡಿದ್ದರು.

ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಜತೆಗೆ ವ್ಯವಹರಿಸಿ ಎಂದು ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ವಿನಂತಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.