ADVERTISEMENT

ಶಿವಮೊಗ್ಗ: ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರು

ಲೋಕಾರ್ಪಣೆ ಬಳಿಕ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
   

ಶಿವಮೊಗ್ಗ: ಜಿಲ್ಲೆಯ ಅಂಬಾರಗೋಡ್ಲು- ಕಳಸವಳ್ಳಿ ನಡುವೆ, ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ನೂತನ ತೂಗು ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರು ಇಡಲಾಗುವುದು ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.

ಸೋಮವಾರ ಸೇತುವೆ ಲೋಕಾರ್ಪಣೆ ಬಳಿಕ ಸಾಗರದ ನೆಹರೂ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸೇತುವೆ ನಿರ್ಮಾಣ ಕೆಲಸ ನನ್ನಿಂದ ಆಗಿಲ್ಲ. ಬದಲಿಗೆ, ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಆಗಿದೆ. ಆ ತಾಯಿಯ ಹೆಸರು ಇರಿಸುವ ಮೂಲಕ ಈ ಭಾಗದ ಜನರ ಭಾವನೆಗಳನ್ನು ಗೌರವಿಸಲಾಗುತ್ತಿದೆ’ ಎಂದು ಹೇಳಿದರು. 

ಸ್ಥಳೀಯರು ಇಲ್ಲಿಯವರೆಗೂ ಲಾಂಚ್‌ಗಳ ಹೊರತಾಗಿ 100 ಕಿ.ಮೀ.ನಷ್ಟು ದೂರ ಕ್ರಮಿಸಿ ಹೊರ ಜಗತ್ತಿನ ಸಂಪರ್ಕ ಪಡೆಯಬೇಕಿತ್ತು. ಸೇತುವೆ ನಿರ್ಮಾಣದಿಂದ ಶಾಶ್ವತವಾಗಿ ಅವರ ಬವಣೆ ನೀಗಿಸಿದ ತೃಪ್ತಿ ಇದೆ ಎಂದರು.

ADVERTISEMENT

‘2030ರ ಡಿಸೆಂಬರ್ ವೇಳೆಗೆ ಕರ್ನಾಟಕದಲ್ಲಿ ₹5 ಲಕ್ಷ ಕೋಟಿ ವೆಚ್ಚದ ಹೆದ್ದಾರಿ ಹಾಗೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ₹2,056 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ, ಕೆಲವು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಗುರುರಾಜ ಗಂಟಿಹೊಳಿ, ಸಿಮೆಂಟ್ ಮಂಜು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಮಾಜಿ ಸಚಿವ ಹರತಾಳು ಹಾಲಪ್ಪ ಹಾಜರಿದ್ದರು.

ಶಿವಮೊಗ್ಗ ಜಿಲ್ಲೆಯ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿದ ಸೇತುವೆಯನ್ನು ಸೋಮವಾರ ಲೋಕಾರ್ಪಣೆ ಮಾಡಿದ ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನಂತರ ಶಿಲಾನ್ಯಾಸ ನೆರವೇರಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಸದ ಬಿ.ವೈ.ರಾಘವೇಂದ್ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಉಪಸ್ಥಿತರಿದ್ದರು

ಸಿ.ಎಂ ಸೂಚನೆ - ಕಾರ್ಯಕ್ರಮಕ್ಕೆ ತೆರಳದ ಸಚಿವ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಸಾಗರ ನಗರಕ್ಕೆ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

ಸೇತುವೆ ಲೋಕಾರ್ಪಣೆಗೆ ತಮ್ಮನ್ನು ಆಹ್ವಾನಿಸುವಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಮಾಧ್ಯಮಗಳ ಎದುರು ಬೇಸರ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಸಚಿವರು ಶಾಸಕರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದರು.

ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ ‘ಮುಖ್ಯಮಂತ್ರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ಕೆಲವರಿಂದ ತಪ್ಪುಗಳಾಗಿವೆ. ಯೋಜನೆ ಕೇಂದ್ರದ್ದೇ ಆದರೂ ಭೂಮಿ ನಮ್ಮದು. ಹೀಗಾಗಿ ಪರಸ್ಪರ ಸಮನ್ವಯ ಅಗತ್ಯ. ಮುಂದೆ ಇಂತಹದು ಮರುಕಳಿಸಬಾರದು’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರೂ ಕಾರ್ಯಕ್ರಮದಿಂದ ದೂರ ಉಳಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪಾಲ್ಗೊಂಡಿದ್ದರು.

ಅಧಿಕಾರಿಗಳು ಗೈರು?: ಸಿ.ಎಂ. ಸೂಚನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿ ಕಾಣಿಸಲಿಲ್ಲ.

ಬಿರು ಮಳೆಯಲ್ಲೇ ಲೋಕಾರ್ಪಣೆ

ಬಿಟ್ಟೂ ಬಿಡದೆ ಸುರಿದ ಮಳೆಯ ನಡುವೆಯೇ ಮಧ್ಯಾಹ್ನ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಶರಾವತಿ ನದಿಗೆ ಬಾಗಿನ ಸಮರ್ಪಿಸಿದರು. ನಂತರ ಸಿಗಂದೂರು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಊಟ ಮಾಡಿದರು.

ಗಣಹೋಮ ಪೂಜೆ: ಲೋಕಾರ್ಪಣೆಗೂ ಮುನ್ನ ಸೇತುವೆಯ ಸುರಕ್ಷತೆಗೆ ಪ್ರಾರ್ಥಿಸಿ ಸ್ಥಳೀಯರು ಗಣ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಿದರು. 

ಸೇತುವೆಯನ್ನು ಸ್ಥಳೀಯರು ಮಾವಿನ ತೋರಣ- ತಳಿರುಗಳಿಂದ ಅಲಂಕರಿಸಿದ್ದು ತುಮರಿ ಬ್ಯಾಕೋಡು ಸಿಗಂದೂರು ಕಳಸವಳ್ಳಿ ಭಾಗದ ದ್ವೀಪದ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಕೊಡೆ ಹಿಡಿದು ರೇನ್ ಕೋಟ್ ಜರ್ಕಿನ್ ಧರಿಸಿ ಬಂದು ಲೋಕಾರ್ಪಣೆಯ ಕ್ಷಣ ಕಣ್ತುಂಬಿಕೊಂಡರು. ಸೇತುವೆಯ ಎರಡೂ ಬದಿಯಲ್ಲಿ ಓಡಾಡಿ ಸಂಭ್ರಮಿಸಿದರು.

‘ಶಿಷ್ಟಾಚಾರ ಪಾಲನೆಯಾಗಿಲ್ಲ’

ಬೆಂಗಳೂರು: ತೂಗುಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಪಾಲಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ನನಗೆ ಮಾಹಿತಿ ನೀಡದೇ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ. ವಿಜಯಪುರದಲ್ಲಿ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಸಾಗರ ತಾಲ್ಲೂಕಿನ ಕಾರ್ಯಕ್ರಮಗಳ ಉದ್ಘಾಟನೆ ಮುಂದೂಡು ವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರಿಗೆ ಪತ್ರವನ್ನು ಬರೆದಿದ್ದೆ. ಕರೆ ಮಾಡಿಯೂ ತಿಳಿಸಿದ್ದೆ. ಅವರು ಮುಂದೂಡಲು ಸಮ್ಮತಿಸಿದ್ದರು. ಆದರೆ, ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೆ ಕಾರ್ಯಕ್ರಮ ಆಯೋಜಿಸಿದ್ದಾರೆ’ ಎಂದು ಸುದ್ದಿಗಾರರಿಗೆ‌ತಿಳಿಸಿದರು.

‘ಈ ತಿಕ್ಕಾಟವನ್ನು ಕೇಂದ್ರ ಸರ್ಕಾರವೇ ಆರಂಭಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಟಾಚಾರಗಳನ್ನು ತಪ್ಪದೇ ಪಾಲಿಸುತ್ತದೆ’ ಎಂದರು.

ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ರಾಜ್ಯದ ಮುಖ್ಯಮಂತ್ರಿಯವರಿಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು
ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರ

ಬೆಂಗಳೂರು: ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ತೂಗುಸೇತುವೆ ಉದ್ಘಾಟನೆ ಸೇರಿದಂತೆ ಜುಲೈ 14ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ರಾಜ್ಯ ಸರ್ಕಾರ ತನ್ನ ಪ್ರತಿಭಟನೆ ದಾಖಲಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ನನಗೆ ಮಾಹಿತಿ ನೀಡದೇ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ. ಉದ್ಘಾಟನೆಯನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರಿಗೆ ಪತ್ರವನ್ನು ಬರೆದಿದ್ದೆ. ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೆ ಕಾರ್ಯಕ್ರಮ ಆಯೋಜಿಸಿದ್ದಾರೆ. ರಾಜ್ಯ ಸರ್ಕಾರದ ಸ್ಪಷ್ಟ ಭಿನ್ನಾಭಿಪ್ರಾಯದ ಹೊರತಾಗಿಯೂ ಕಾರ್ಯಕ್ರಮ ನಡೆಸಿರುವುದು ಒಕ್ಕೂಟದ ವ್ಯವಸ್ಥೆಯ ಆಶಯಗಳನ್ನೇ ಧಿಕ್ಕರಿಸಿದಂತೆ ಆಗಿದೆ. ಭವಿಷ್ಯದಲ್ಲಿ ಇಂತಹ ನಡವಳಿಕೆಗಳಿಗೆ ಅವಕಾಶ ನೀಡದಂತೆ ಕೇಂದ್ರದ ಎಲ್ಲ ಸಚಿವಾಲಯಗಳಿಗೂ ಸಲಹೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.