ADVERTISEMENT

ರಾಷ್ಟ್ರೀಯ ಭದ್ರತಾ ದಳದಲ್ಲಿ ಕರುನಾಡ ದಿಟ್ಟೆ!

ಡಿ.ಎಚ್.ಕಂಬಳಿ
Published 4 ನವೆಂಬರ್ 2019, 6:12 IST
Last Updated 4 ನವೆಂಬರ್ 2019, 6:12 IST
ರೇಣುಕಾ 
ರೇಣುಕಾ    

ಸಿಂಧನೂರು:2014 ರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸೇರ್ಪಡೆಯಾಗಿದ್ದ ತಾಲ್ಲೂಕಿನ ಅಮರಾಪುರ ಗ್ರಾಮದ ರೇಣುಕಾ ಕೋಟೆ ಅವರು, ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)ಕ್ಕೆ ಆಯ್ಕೆಯಾಗಿದ್ದಾರೆ.

ಎನ್‌ಎಸ್‌ಜಿ ಪಡೆಯಲ್ಲಿ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೋ ಹುದ್ದೆಯಲ್ಲಿ ನಾಲ್ಕು ತಿಂಗಳುಗಳಿಂದ ರೇಣುಕಾ ಕಾರ್ಯನಿರ್ವಹಿಸುತ್ತಿದ್ದಾರೆ.ಪಂಜಾಬ್‌ನಲ್ಲಿ 12 ತಿಂಗಳ ತರಬೇತಿ ಪಡೆದ ನಂತರ ಪಶ್ಚಿಮ ಬಂಗಾಳದ 31ನೇ ಬಟಾಲಿಯನ್‌ನಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬಟಾಲಿಯನ್‌ನಲ್ಲಿದ್ದ 40 ಯೋಧೆಯರ ಪೈಕಿ ದೈಹಿಕ, ಲಿಖಿತ ಪರೀಕ್ಷೆಗಳಲ್ಲಿ ರೇಣುಕಾ ಒಬ್ಬರೆ ಎನ್‌ಎಸ್‌ಜಿಗೆ ಆಯ್ಕೆಯಾಗಿದ್ದಾರೆ. ದೇಶದಲ್ಲಿ ಒಟ್ಟು 21 ಮಹಿಳಾ ಸೈನಿಕರು ಎನ್‌ಎಸ್‌ಜಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ರೇಣುಕಾ ಒಬ್ಬರಾಗಿರುವುದು ವಿಶೇಷ.

ಸಿಂಧನೂರಿನ ಹಂಪಮ್ಮ ಬಾದರ್ಲಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಓದಿ, ಬಳ್ಳಾರಿಯ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಆನಂತರ ರಾಜ್ಯ ಸಿವಿಲ್ ಪೊಲೀಸ್ ಹುದ್ದೆ ಪರೀಕ್ಷೆ ಪಾಸಾದರೂ ಕೈಬಿಟ್ಟು,ಬೆಂಗಳೂರಿನ ಯಲಹಂಕದಲ್ಲಿ 2014ರಲ್ಲಿ ನಡೆದ ಸೇನಾ ಆಯ್ಕೆಯಲ್ಲಿ ಅರೆಸೇನಾ ಪಡೆಗೆ ಆಯ್ಕೆಯಾಗಿ ಬಿಎಸ್‌ಎಫ್‌ ಸೇರ್ಪಡೆಯಾದರು.

ADVERTISEMENT

ತಾಯಿ ನಾಗಮ್ಮ ಅಮರಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ.ತಂದೆ ನಾಗಪ್ಪ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಇಬ್ಬರು ಪುತ್ರಿಯರು.ಇನ್ನೊಬ್ಬರು ರೇಣುಕಾ ಅವರ ತಂಗಿ ರಾಧಿಕಾ ಅವರು ಪಿಯುಸಿ ಓದುತ್ತಿದ್ದಾರೆ.

‘ಎನ್‌ಸಿಸಿ ಡ್ರೆಸ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿಯಾ ಎಂದು ಗೆಳತಿಯೊಬ್ಬರು ಡಿಪ್ಲೊಮಾ ಓದುತ್ತಿದ್ದಾಗ ಹೇಳಿದ ಮಾತು ಸ್ಫೂರ್ತಿ ಆಯಿತು.ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಸಂಕಲ್ಪ ಮಾಡಿದೆ. ನನ್ನ ಇಷ್ಟದಂತೆ ಪ್ರಥಮ ಬಾರಿ ಅರ್ಜಿ ಹಾಕಿದಾಗಲೇ ಸೇನೆಗೆ ನೇಮಕಾತಿ ಸಿಕ್ಕಿ ಬಿಟ್ಟಿತು. ಹೀಗಾಗಿ ನನ್ನ ಗುರಿ ಸಾಧಿಸಲು ಅನುಕೂಲವಾಯಿತು’ ಎನ್ನುತ್ತಾರೆ ರೇಣುಕಾ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.