ADVERTISEMENT

ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್‌’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:40 IST
Last Updated 17 ನವೆಂಬರ್ 2025, 15:40 IST
ಪರಕಾಲ ಪ್ರಭಾಕರ್
ಪರಕಾಲ ಪ್ರಭಾಕರ್   

ಬೆಂಗಳೂರು: ಜನರ ನಿರ್ಲಿಪ್ತತೆಯನ್ನೇ ಬಂಡವಾಳ ಮಾಡಿಕೊಂಡು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಂತಹ (ಎಸ್‌ಐಆರ್‌) ಕಾರ್ಯಗಳನ್ನು ಕೇಂದ್ರ ಸರ್ಕಾರ ನಿರ್ಭೀತಿಯಿಂದ ಮಾಡಿಸುತ್ತಿದೆ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪಿಸಿದರು.

‘ಕರ್ನಾಟಕ ಜನಶಕ್ತಿ’ ಸಂಘಟನೆ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಐಆರ್‌ ವಿರೋಧಿ ಮಂಥನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜನರ ಉದಾಸೀನತೆ ಆಳುವವರಿಗೆ ಏನು ಸಂದೇಶ ನೀಡುತ್ತದೆ? ಏನು ಬೇಕಾದರೂ ಮಾಡಬಹುದು, ಈ ಜನರು ಸುಮ್ಮನಿರುತ್ತಾರೆ, ಪ್ರಶ್ನಿಸುವುದಿಲ್ಲ ಎನ್ನುವುದು ಕೇಂದ್ರ ಸರ್ಕಾರದ ಪ್ರಮುಖರಿಗೆ ಮನವರಿಕೆಯಾಗಿದೆ. ಒಂದು ನಾಗರಿಕ ಸಮಾಜದ ಒಳಗಿನಿಂದಲೇ ನಾವು ಎದುರಿಸುತ್ತಿರುವ ಅಪಾಯವನ್ನೂ ಪೂರ್ತಿಯಾಗಿ ಜನರು ಗ್ರಹಿಸಿದಂತೆ ಕಾಣುತ್ತಿಲ್ಲ. ತೆರೆದ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆದಾಗ ಎಷ್ಟು ಜನರು ಬೀದಿಗೆ ಇಳಿದರು? ಮುಖ್ಯ ನ್ಯಾಯಮೂರ್ತಿಗಳಿಗೆ ಅನ್ಯಾಯವಾದರೂ ನಾವು ಬ್ಯುಸಿಯಾಗಿದ್ದೇವೆ. ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸುಮ್ಮನೆ ನೋಡುತ್ತಿದ್ದೇವೆ. ಇದೆಲ್ಲವನ್ನೂ ಗಮನಿಸಿಯೇ ಅವರು ಎಸ್‌ಐಆರ್‌ನಂತಹ ಕೆಲಸ ಮಾಡಿಸುತ್ತಿದ್ದಾರೆ’ ಎಂದರು.  

ADVERTISEMENT

‘ನಿರುದ್ಯೋಗ ಸಮಸ್ಯೆಯೇ ಅಲ್ಲ ಎನ್ನುವಂತೆ ಇದ್ದೇವೆ. ಮನೆಯ ಉಳಿತಾಯ ಕರಗಿ ಸಾಲ ಬೆಟ್ಟದಷ್ಟು ಏರುತ್ತಿದ್ದರೂ ತಲೆಕೆಡಿಸಿಕೊಂಡಿಲ್ಲ. ಉದ್ಯೋಗ ಖಾತ್ರಿಗೆ ನೀಡಿದ ಹಣ ಆರು ತಿಂಗಳಿಗೆ ಖರ್ಚಾಗುತ್ತಿದೆ. ಗ್ರಾಮೀಣ ಸಮಸ್ಯೆ ಎಷ್ಟಿದೆ ಎನ್ನುವುದಕ್ಕೆ ಇದು ಉದಾಹರಣೆ. ಇಂತಹ ನೂರಾರು ಸಮಸ್ಯೆಗಳಿದ್ದರೂ ಜನರ ಆಲೋಚನೆಯ ದಿಕ್ಕು ಬೇರೆ ಕಡೆ ತಿರುಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಲೇಖಕ ಶಿವಸುಂದರ್‌ ಮಾತನಾಡಿ, ‘ದೇಶದಲ್ಲಿ ರಾಜಕೀಯ ಬಹುಮತಕ್ಕೆ ಬದಲಾಗಿ ಧಾರ್ಮಿಕ, ಮತಾಧಾರಿತ ಬಹುಮತವನ್ನು ಸೃಷ್ಟಿಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಸಿಖ್‌, ಬ್ರಾಹ್ಮಣ, ಕ್ಷತ್ರಿಯ ಶೂದ್ರ ಅಸ್ಮಿತೆಗಳೂ ರಾಜಕೀಯಗೊಂಡಿವೆ. ಜಾತಿ-ಧರ್ಮದ ಅಸ್ಮಿತೆಯ ಕಾರಣಕ್ಕೆ ಒಂದು ನಿಲುವನ್ನು ಬೆಂಬಲಿಸಬೇಕು ಎಂಬ ಒತ್ತಡ ಹಾಕಲಾಗುತ್ತಿದೆ’ ಎಂದು ದೂರಿದರು. 

ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾರಾವ್, ಮುಖಂಡ ನೂರ್‌ ಶ್ರೀಧರ್‌, ಸಂಖ್ಯಾತಜ್ಞ ಮಾಧವ ದೇಶಪಾಂಡೆ, ವಕೀಲರಾದ ಮಾನವಿ, ಎಲೆಕ್ಷನ್‌ ವಾಚ್‌ ಮತ್ತು ದಕ್ಷ್‌ ಸಂಸ್ಥೆಯ ಹರೀಶ್‌ ನರಸಪ್ಪ, ಜಮಾತೆ ಇಸ್ಲಾಮಿ ಹಿಂದ್‌ನ ಮಹಮ್ಮದ್‌ ಕುಂಞಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.