
ಧಾರವಾಡ: ‘ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಸಾಧ್ಯವಾದಷ್ಟು ಮತದಾರರನ್ನು ಹೊರಗಿಡಲಾಗುತ್ತಿದೆ. ಎಸ್‌ಐಆರ್ ಜ್ಞಾನ, ಸಂಪತ್ತು ಶಿಕ್ಷಣ, ಆಸ್ತಿ ಇದ್ದವರಿಗೆ ಮಾತ್ರ ವೋಟಿನ ಹಕ್ಕು ನೀಡುವ ಹುನ್ನಾರ’ ಎಂದು ಚಿಂತಕ ಶಿವಸುಂದರ್ ಹೇಳಿದರು.
ಎದ್ದೇಳು ಕರ್ನಾಟಕ, ಮುಸ್ಲಿಂ ಮುತ್ತಹದೇ ಮಹಾಜ್ ಹಾಗೂ ನಮ್ಮ ಓಟು ನಮ್ಮ ಹಕ್ಕು ಅಭಿಯಾನದ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಎಸ್‌ಐಆರ್ ವಿರೋಧಿ ಮಂಥನಾ ಸಮಾವೇಶದಲ್ಲಿ ಮಾತನಾಡಿದರು.
‘ಎಸ್‌ಐಆರ್‌ನಲ್ಲಿ ದಾಖಲೆ (ಆಯೋಗದವರು ಹೇಳಿದ 11 ದಾಖಲೆ) ನೀಡಿ ಮತದಾರ ಎಂದು ಸಾಬೀತು ಮಾಡಿಕೊಳ್ಳಬೇಕಾಗಿದೆ. ಎಸ್‌ಐಆರ್‌ನಲ್ಲಿ ನರೇಗಾ ಕಾರ್ಡ್, ರೇಷನ್ ಕಾರ್ಡ್ ಮೊದಲಾದ ದಾಖಲೆಗಳನ್ನು ಪರಿಗಣಿಸಲ್ಲ. ಎಸ್‌ಐಆರ್‌ನಲ್ಲಿ ಪಾರದರ್ಶಕತೆ ಇಲ್ಲ. ಸಂವಿಧಾನ ಮತ್ತು ಕಾನೂನಿನಲ್ಲಿ ಎಸ್‌ಐಆರ್ ಇಲ್ಲ’ ಎಂದು ಹೇಳಿದರು.
‘ಸಂವಿಧಾನದ ದೇಶದ ಎಲ್ಲ ಪ್ರಜೆಗಳಿಗೂ ಮತದಾನದ ಹಕ್ಕು ನೀಡಿದೆ. ಚುನಾವಣೆ ಆಯೋಗವೇ ಮನೆಮನೆಗೆ ತೆರಳಿ ಅರ್ಹ ಮತದಾರರನ್ನು (ವಯಸ್ಸು, ವಸತಿ ಆಧರಿಸಿ) ಮತಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಜನತಾ ಪ್ರಾತಿನಿಧ್ಯ ಕಾಯ್ದೆ ಹೇಳುತ್ತದೆ. ಆದರೆ, ಜನರೇ ಬಂದು ದಾಖಲೆ ನೀಡಿ ಮತದಾರರೆಂದು ಸಾಬೀತು ಮಾಡಿಕೊಳ್ಳಬೇಕು ಎಂದು ಎಸ್‌ಐಆರ್ ಹೇಳುತ್ತದೆ ’ ಎಂದರು.
‘ಎಲ್ಲರನ್ನೂ ಒಳ್ಳಗೊಳ್ಳುವುದು, ಆಡಳಿತ ನಡೆಸುವುದು ಸಂವಿಧಾನದ ಆಶಯ. ಸಂವಿಧಾನ ಎಲ್ಲರಿಗೂ ಸಮಾನವಾಗಿ ವೋಟಿನ ಹಕ್ಕು ನೀಡಿದೆ. ಎಸ್‌ಐಆರ್ ಅದಕ್ಕೆ ತದ್ವಿರುದ್ಧವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.