ADVERTISEMENT

ಶಿರಾದಲ್ಲಿ ವಿಜಯೇಂದ್ರ ದುಡ್ಡು ಹಂಚಿಸುತ್ತಿದ್ದಾರೆ: ಎಚ್‌.ಡಿ.ದೇವೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 9:37 IST
Last Updated 28 ಅಕ್ಟೋಬರ್ 2020, 9:37 IST
ಎಚ್‌.ಡಿ.ದೇವೇಗೌಡ ಆರೋಪ
ಎಚ್‌.ಡಿ.ದೇವೇಗೌಡ ಆರೋಪ   

ಬೆಂಗಳೂರು: ಶಿರಾ ಕ್ಷೇತ್ರದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಂತ್ರ ಏನೆಂಬುದು ಗೊತ್ತಾಗಿದೆ. ಪೊಲೀಸರ ಮೂಲಕ ದುಡ್ಡು ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೇರವಾಗಿ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ಶಿರಾದಲ್ಲಿ ಬಿಜೆಪಿಯವರು ಚುನಾವಣೆಗೆ ಯಾವ ತಂತ್ರ ಅನುಸರಿಸಿದ್ದಾರೆ. ಅದರಲ್ಲಿ ವಿಜಯೇಂದ್ರ ಪಾತ್ರ ಏನು ಎಂಬ ವರದಿ ನನ್ನ ಬಳಿ ಇದೆ. ಪೊಲೀಸರ ಮೂಲಕ ಹಣ ಹಂಚಿಸುತ್ತಿದ್ದಾರೆ ಎಂದು ಕೆಲವರು ನನ್ನ ಬಳಿ ಹೇಳಿದ್ದಾರೆ. ಈ ಬಗ್ಗ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ನಿಷ್ಪಕ್ಷ ಚುನಾವಣೆ ನಡೆಯಲು ಸಾಧ್ಯವಿಲ್ಲ. ದೇಶದಲ್ಲೇ ಹೀಗಿದೆ ಇನ್ನು ರಾಜ್ಯದಲ್ಲಿ ಏನು ಮಾಡಲು ಆಗುತ್ತದೆ ಎಂದು ಪ್ರಶ್ನಿಸಿದರು.

ADVERTISEMENT

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇನೆ. ಇದರ ಬಗ್ಗೆ ಮಾತನಾಡುತ್ತಾ ಕೂತರೆ ಪ್ರಯೋಜನವಿಲ್ಲ ಎಂದು ಸುಮ್ಮನಾಗಿದ್ದೇನೆ ಎಂದರು.

ಶಿರಾದಲ್ಲಿ ಮತ್ತೊಂದು ಸುತ್ತಿನ ಪ್ರಚಾರಕ್ಕೆ ಹೋಗುತ್ತೇನೆ. ನಾವು ಯಾರ ವಿರುದ್ಧ ಚಾಲೆಂಜ್‌ ಮಾಡಲು ಹೊರಟಿಲ್ಲ. ರಾಜ್ಯದ ಏಳಿಗೆಗಾಗಿ ಕೊನೆವರೆಗೂ ಹೋರಾಟ ಮಾಡುತ್ತೇನೆ. ಪ್ರಾದೇಶಿಕ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ಉಳಿಸಲು ಕೊನೆವೆರೆಗೂ ಹೋರಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಕೆಲವರು(ಸಿದ್ದರಾಮಯ್ಯ) ಹೇಳ್ತಾರೆ. ಇಂಥ ಹೇಳಿಕೆ ನೀಡುವವರು ಇಲ್ಲಿ ಇದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅವರ ಹೇಳಿಕೆ ಕೇಳಿ ಬೇಸರ ಆಯ್ತು ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಅವರು ಎಲ್ಲ ಕಡೆ ಪ್ರಚಾರ ಮಾಡಿದ್ದಾರೆ. ಅವರಿಗೆ ಉತ್ತಮ ಬೆಂಬಲ ಸಿಗುತ್ತಾ ಇದೆ. ಶಿರಾ ಮತ್ತು ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.