ADVERTISEMENT

ಈಶ್ವರಪ್ಪ ವಜಾ ಆಗ್ರಹಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 9:59 IST
Last Updated 14 ಏಪ್ರಿಲ್ 2022, 9:59 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಲು ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ.

ವಿಧಾನಸೌಧದ ಬಳಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ನಾವು 24 ಗಂಟೆಗಳ ಅಹೋರಾತ್ರಿ ಧರಣಿ ಮಾಡುತ್ತೇವೆ. ಇಂದು ಇಡೀ ರಾತ್ರಿ ಹಾಗೂ ನಾಳೆಯವರೆಗೆ ಧರಣಿ ನಡೆಸುತ್ತೇವೆ. ಅಹೋರಾತ್ರಿ ಧರಣಿ ನಂತರ ಇಡೀ ರಾಜ್ಯ ಪ್ರವಾಸಕ್ಕೆ ತೆರಳಿ ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹಿಸುತ್ತೇವೆ‘ ಎಂದರು.

‘ನಾವೆಲ್ಲರೂ ಶುಕ್ರವಾರದಿಂದ (ಏ. 15) ರಾಜ್ಯ ಪ್ರವಾಸಕ್ಕೆ ಹೊರಡಬೇಕಿತ್ತು. ಅದನ್ನು ಒಂದು ದಿನ ಮುಂದೂಡಿದ್ದೇವೆ. ಧರಣಿ ನಡೆಸಿದ ನಂತರ ರಾಜ್ಯ ಪ್ರವಾಸಕ್ಕೆ ಎಲ್ಲ ನಾಯಕರು ತೆರಳುತ್ತೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಬಿಜೆಪಿಯವರು ಇದನ್ನು ಮುಚ್ಚಿ ಹಾಕಲು ದೊಡ್ಡ ಹುನ್ನಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಹೋದರೆ ನಮ್ಮನ್ನು ಪೊಲೀಸರು ವಶಕ್ಕೆ ಪಡೆದು ಬಿಟ್ಡು ಕಳುಹಿಸಿದ್ದಾರೆ’ ಎಂದರು.

ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಯಾರ್ಯಾರು ಏನೇನು ಬಿಚ್ಚಿದರು ನೋಡಿದ್ದೀರಲ್ಲ. ಏನೇನು ಬಿಚ್ತಾರೋ ಬಿಚ್ಚಲಿ‘ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಾವು 24 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಮಾಡುತ್ತೇವೆ. 16ರಿಂದ 5 ದಿನ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಗೂ ಹೋಗಿ ಪ್ರತಿಭಟನೆ ಮಾಡಿ, ಈಶ್ವರಪ್ಪ ಬಂಧನಕ್ಕೆ ಆಗ್ರಹಿಸುತ್ತೇವೆ,. ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸುತ್ತೇವೆ’ ಎಂದರು.

‘ಅತೀ ಭ್ರಷ್ಟ ಸರ್ಕಾರ. ಅತ್ಯಂತ ಕೆಟ್ಟ ಆಡಳಿತ ರಾಜ್ಯದಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭ್ರಷ್ಟಾಚಾರದ ಗಂಗೋತ್ರಿಯ ಅಧ್ಯಕ್ಷ. ಭ್ರಷ್ಟಾಚಾರದ ಹೆಚ್ಚು ಹಣ ಹೋಗುತ್ತಿರುವುದು ಅವರಿಗೇ‘ ಎಂದು ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ, ‘ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಆರೋಪಿ 1. ಮುಖ್ಯಮಂತ್ರಿ ಕೂಡ ಭ್ರಷ್ಟಾಚಾರದಲ್ಲಿ ಭಾಗಿ. ಹೀಗಿರುವಾಗ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.