ADVERTISEMENT

ಬಿಟ್ ಕಾಯಿನ್: ಪ್ರಶಾಂತ್, ಸಂತೋಷ್‌ ಎಸ್‌ಐಟಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 16:27 IST
Last Updated 25 ಜನವರಿ 2024, 16:27 IST
ಪ್ರಶಾಂತ್‌ ಬಾಬು
ಪ್ರಶಾಂತ್‌ ಬಾಬು   

ಬೆಂಗಳೂರು: ಬಿಟ್‌ ಕಾಯಿನ್ ಅಕ್ರಮ ಪ್ರಕರಣದಲ್ಲಿ ಡಿಜಿಟಲ್‌ ಸಾಕ್ಷ್ಯ ನಾಶಪಡಿಸಿದ್ದ ಆರೋಪದ ಮೇಲೆ ಬಂಧಿತರಾಗಿರುವ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಕುಮಾರ್‌ ಅವರನ್ನು ಜ. 31ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.

‘ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬುಧವಾರ ಪ್ರಶಾಂತ್ ಬಾಬು ಹಾಗೂ ಸಂತೋಷ್ ಅವರನ್ನು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಮುಖ ಆರೋಪಿಯಾಗಿರುವ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಸಿಬಿ ಪೊಲೀಸರು ಹಾಗೂ ಇತರರು, ಸಾಕ್ಷ್ಯ ನಾಶಪಡಿಸಿದ ಆರೋಪ ಹೊತ್ತಿದ್ದಾರೆ. ಇದನ್ನು ಪತ್ತೆ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ಸಿಸಿಬಿ ಪೊಲೀಸರು ಹಾಗೂ ಇತರರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ADVERTISEMENT

‘ಸಂತೋಷ್‌ ಕುಮಾರ್‌ ಅವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಜಿಸಿಐಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತೆರೆದಿದ್ದರು. ಅದೇ ಕಂಪನಿಯಲ್ಲಿ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ್ ಅವರನ್ನು ಅಕ್ರಮ ಬಂಧನದಲ್ಲಿಟ್ಟು, ಅಕ್ರಮ ಚಟುವಟಿಕೆಗೆ ಪ್ರಚೋದಿಸಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಹಾಗೂ ಇತರರು, ಶ್ರೀಕಿಗೆ  ಲ್ಯಾಪ್‌ಟಾಪ್ ಕೊಡಿಸಿ ರಾಬಿನ್ ಖಂಡೇಲ್‌ವಾಲ ಅವರ ಕ್ರಿಫ್ಟೊ ಖಾತೆಯನ್ನು ಅನಧಿಕೃತವಾಗಿ ತೆರೆದು ಸಂತೋಷ್‌ ಕುಮಾರ್‌ ಅವರ ಖಾತೆಗೆ 1.83 ಲಕ್ಷ‌ ಮೌಲ್ಯದ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ರೀತಿಯ ಅಕ್ರಮ ಎಸಗಲು 2020ರ ಡಿಸೆಂಬರ್ 8ರಂದು ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಎಂಎಸ್ಐ ಕಂಪನಿಯ ಲ್ಯಾಪ್‌ಟಾಪ್‌ ಅನ್ನು ತಾವೇ ₹60 ಸಾವಿರವನ್ನು ನಗದ ರೂಪದಲ್ಲಿ ನೀಡಿ ಖರೀದಿಸಿದ್ದರು. ಅದನ್ನೇ ಕೃತ್ಯಕ್ಕೆ ಬಳಸಲಾಗಿದೆ ಎಂದು ಎಫ್ಐಆರ್ ಹೇಳಿದೆ.

‘ಸೈಬರ್ ತಜ್ಞ ಸಂತೋಷ್ ಕುಮಾರ್, ಸಿಸಿಬಿ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ, ಚಂದ್ರಾಧರ್, ಡಿ.ಎಂ. ಪ್ರಶಾಂತ್ ಬಾಬು, ಶ್ರೀಧರ್ ಪೂಜಾರ್ ಹಾಗೂ ಇತರರು ಬಿಟ್ ಕಾಯಿನ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಪ್ರಶಾಂತ್ ಬಾಬು, ಸಂತೋಷ್ ಅವರನ್ನು ಬಂಧಿಸಲಾಗಿದ್ದು, ಇನ್‌ಸ್ಪೆಕ್ಟರ್ ಜೊತೆ ಕೆಲ ಹಿರಿಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಹಿರಿಯ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತೋಷ್‌ ಕುಮಾರ್

‘ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಸಿಸಿಬಿ ಪೊಲೀಸರು’

‘ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಗಳಿಸಿದ್ದ ಬಿಟ್‌ ಕಾಯಿನ್‌ಗಳ ಬಗ್ಗೆ ಸಿಸಿಬಿ ಪೊಲೀಸರಿಗೆ ಹೆಚ್ಚು ಮಾಹಿತಿ ಇರಲಿಲ್ಲ. ಸೈಬರ್ ತಜ್ಞರಾದ ಸಂತೋಷ್ ಹಾಗೂ ಗಗನ್ ಬಿಟ್ ಕಾಯಿನ್ ಬಗ್ಗೆ ಮಾಹಿತಿ ನೀಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ‘ಈ ಮಾಹಿತಿ ಬಳಸಿಕೊಂಡು ಶ್ರೀಕಿ ಕಡೆಯಿಂದ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸುಳಿವು ಸಿಗಬಾರದೆಂದು ಡಿಜಿಟಲ್‌ ಸಾಕ್ಷ್ಯ ನಾಶ ಮಾಡಿರುವ ಮಾಹಿತಿ ಇದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.