ADVERTISEMENT

‘ಷಡ್ಯಂತ್ರ’ ಭಯ: ಎಚ್ಚೆತ್ತುಕೊಂಡ ಆರು ಸಚಿವರು ಕೋರ್ಟ್‌ಗೆ ಮೊರೆ

ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೆ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 2:22 IST
Last Updated 7 ಮಾರ್ಚ್ 2021, 2:22 IST
ಕೋರ್ಟ್‌ ಮೆಟ್ಟಿಲೇರಿರುವ ಆರು ಸಚಿವರು
ಕೋರ್ಟ್‌ ಮೆಟ್ಟಿಲೇರಿರುವ ಆರು ಸಚಿವರು    

ಬೆಂಗಳೂರು: ಸಿ.ಡಿ. ಬಹಿರಂಗವಾದ ಕಾರಣಕ್ಕೆ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ತಮ್ಮ ವಿರುದ್ಧ ಮಾನ ಹಾನಿಕರ ಸುದ್ದಿ ಪ್ರಕಟಿಸದಂತೆ ನಿರ್ಬಂಧಿಸಬೇಕೆಂದು ಕೋರಿ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಈ ಆರು ಸಚಿವರಲ್ಲದೆ, ಕಾಂಗ್ರೆಸ್‌, ಜೆಡಿಎಸ್‌ ತ್ಯಜಿಸಿ ಮುಂಬೈಯಲ್ಲಿ ಕೆಲವು ದಿನ ಠಿಕಾಣಿ ಹೂಡಿ, ಬಳಿಕ ಬಿಜೆಪಿ ಜೊತೆ ಕೈಜೋಡಿಸಿ ಸಚಿವರಾದ ಇನ್ನೂ ಕೆಲವರು ಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

‘ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಕೆಡವಿದ ಕಾರಣಕ್ಕೆ ನಮ್ಮನ್ನು ಗುರಿ ಮಾಡಿ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಆರೂ ಸಚಿವರು ತಿಳಿಸಿದ್ದಾರೆ.

ADVERTISEMENT

‘ವೈಯಕ್ತಿಕ ತೇಜೋವಧೆಗೆ ಯತ್ನ ನಡೆಯುತ್ತಿದೆ. ಹೀಗಾಗಿ, ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಕೇಂದ್ರ ಸಚಿವ ಸದಾನಂದ ಗೌಡ, ‘ಅನವಶ್ಯಕವಾಗಿ ಕೋರ್ಟ್‌ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡುವುದು ಸರಿಯಲ್ಲ’ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಳನಾಯಕರನ್ನಾಗಿ ಮಾಡುವ ಷಡ್ಯಂತ್ರ: ‘ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದುಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

‘ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸುತ್ತಿರುವ ಗುಮಾನಿ ಇದೆ. ನೈಜತೆ ಇದ್ದರೆ ಯಾವುದನ್ನೂ ನಿಷೇಧಿಸಲು ಸಾಧ್ಯವಿಲ್ಲ. ನಾನೂ ಸೇರಿದಂತೆ ಯಾರದೇ ಆಗಿರಲಿ‌, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಜನರ ಮುಂದೆ ಖಳನಾಯಕರನ್ನಾಗಿ ಮಾಡುವ ಷಡ್ಯಂತ್ರವಿದು’ ಎಂದು ಟೀಕಿಸಿದರು.

‘ತೇಜೋವಧೆ ಮಾಡುವುದನ್ನು ತಡೆಯಲು ಬಲವಾದ ಕಾನೂನು ತರಬೇಕು. ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ಈ ಬಗ್ಗೆ ಚರ್ಚೆ ನಡಸಲಾಗಿದೆ. ಅಲ್ಲದೆ, ಮಾನಹಾನಿಕರ ವರದಿ ಪ್ರಕಟಿಸಬಾರದು ಎಂದು ತಡೆಕೋರಿ ಮತ್ತಷ್ಟು ಸಚಿವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ’ ಎಂದೂ ತಿಳಿಸಿದರು.

'ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಮೊದಲ ದಿನ ಸಂತ್ರಸ್ತೆ ಎಂದು ಹೇಳಿದ್ದಾರೆ. ಆದರೆ, ಅವಳು ಇಲ್ಲಿಯವರೆಗೆ ಯಾಕೆ ಮುಂದೆ ಬಂದಿಲ್ಲ. ಆಕೆಯ ಕುಟುಂಬ ಕೂಡ ಮುಂದೆ ಬಂದಿಲ್ಲ. ಅವಳು ಯಾರು ಏನೂ ಎಂಬುದು ಗೊತ್ತಿಲ್ಲ. ಯಾಕೆ ಗುರಿ ಮಾಡ್ತಾ ಇದ್ದಾರೆ ಅನ್ನೋದು ಗೊತ್ತಿಲ್ಲ.‌ ನಾವು ಯಾವುದೇ ತಪ್ಪು ಮಾಡಿಲ್ಲ; ಮಾಡುವುದೂ ಇಲ್ಲ' ಎಂದರು.

ತೇಜೋವಧೆ ಯತ್ನ: 'ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ತಂದಿದ್ದೇವೆ ಎಂಬ ಸಿಟ್ಟು ಕೆಲವರಲ್ಲಿದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ' ಎಂದು ಹೇಳಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ , ‘ಜಾರಕಿಹೊಳಿ‌ ಸಿ.ಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ' ಎಂದೂ ಒತ್ತಾಯಿಸಿದರು.

‘ಇನ್ನುಳಿದವರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ನಮ್ಮ ರಕ್ಷಣೆ ನಾವು ಮಾಡಿಕೊಳ್ಳುತ್ತೇವೆ. ಒಂದೆರಡು ದಿನಗಳಲ್ಲಿ ಯಾರ ಮೇಲೆ ಅನುಮಾನ ಎಂಬುದು ಗೊತ್ತಾಗಲಿದೆ. ಬಳಿಕ ಮುಖ್ಯಮಂತ್ರಿ ಹಾಗೂ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ’ ಎಂದರು.

ಗೋಜಲು ಸೃಷ್ಟಿ ಸರಿಯಲ್ಲ: ಡಿವಿಎಸ್‌

‘ಅನವಶ್ಯಕವಾಗಿ ಕೋರ್ಟ್‌ಗೆ ಹೋಗುವುದು, ಇಂತಹ ವಿಷಯಗಳನ್ನು ಮತ್ತಷ್ಟು ಗೋಜಲು ಮಾಡುವುದು ಖಂಡಿತಾ ಒಳ್ಳೆಯದಲ್ಲ’ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಆರು ಸಚಿವರು ಕೋರ್ಟ್‌ಗೆ ಹೋಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವೈಯಕ್ತಿಕವಾಗಿ ಕೆಲವರಿಗೆ ಏನೇನೊ ಭಾವನೆಗಳನ್ನು ಇರುತ್ತವೆ. ಅವುಗಳನ್ನು ಕೋರ್ಟ್‌ಗಳಲ್ಲಿ ವ್ಯಕ್ತಪಡಿಸಬಾರದು ಎಂದು ಹೇಳಲು ನಾವು ಯಾರು? ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಭವಿಷ್ಯದ ಸಾಧಕ ಬಾಧಕ ಮನಸ್ಸಿನಲ್ಲಿ ಇರುತ್ತದೆ. ಅದನ್ನು ನೋಡಿ ಕೊಂಡು ಮುಂದಿನ ಹೆಜ್ಜೆ ಇಡುತ್ತಾರೆ’ ಎಂದರು.

‘ಕನಕಪುರ, ಬೆಳಗಾವಿಯವರು ಕಾರಣ’:

‘ರಮೇಶ ಜಾರಕಿಹೊಳಿ ವಿರುದ್ಧ ವಿಡಿಯೊ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಇದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರವಿದೆ. ಆ ವಿಡಿಯೊ ಹೊರಬರಲು ಅವರೇ ಕಾರಣ. ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಈ ವಿವಾದದಲ್ಲಿ ನನ್ನನ್ನೂ ಎಳೆಯಬಿಡಿ’ ಎಂದರು.

‘ಆರು‌ ಜನ ಸಚಿವರು ಕೋರ್ಟ್‌ಗೆ ಹೋಗಿರುವುದು ಯಾಕೆಂದು ನನಗೆ ಗೊತ್ತಿಲ್ಲ. ವೈಯಕ್ತಿಕ ರಕ್ಷಣೆಗೆ ಮೊರೆ ಹೋಗಿರಬೇಕು’ ಎಂದೂ ಹೇಳಿದರು.

ಕೋರ್ಟ್ ಮೊರೆ ಹೋದ ಸಚಿವರು

*ಕೆ.ಸಿ.ನಾರಾಯಣ ಗೌಡ, ಯುವಜನ ಸಬಲೀಕರಣ, ಕ್ರೀಡೆ ಹಾಗೂ ಯೋಜನೆ, ಸಾಂಖ್ಯಿಕ ಸಚಿವ

*ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

*ಬೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

*ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವ

*ಬಿ.ಸಿ. ಪಾಟೀಲ, ಕೃಷಿಸಚಿವ

*ಶಿವರಾಮ್‌ ಹೆಬ್ಬಾರ್‌, ಕಾರ್ಮಿಕ ಸಚಿವ

ಬಿಎಸ್‌ವೈ ತಡೆಯಾಜ್ಞೆ ತರುವುದಿಲ್ಲವೇ: ಕಾಂಗ್ರೆಸ್‌

‘ನಿಮ್ಮದೇ ಪಕ್ಷ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದಂತೆ ಕಣ್ಣಿನಲ್ಲಿ ನೋಡಲಾಗದಂತ ಸಿ.ಡಿ ಇದೆಯಂತೆ. ಯಡಿಯೂರಪ್ಪನವರೇ ನೀವು ತಡೆಯಾಜ್ಞೆ ತರುವುದಿಲ್ಲವೇ’ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

‘ಬಿಜೆಪಿ ಬ್ಲೂಬಾಯ್ಸ್‌’ ಹ್ಯಾಷ್‌ಟಾಗ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ರಾಜ್ಯದಲ್ಲಿರುವುದು ‘ಸಿ.ಡಿ ಸರ್ಕಾರ್’ ಎಂದೂ ಕುಟುಕಿದೆ.

ಕುಂಬಳಕಾಯಿ ಕಳ್ಳ ಎಂದರೆ, ಬಿಜೆಪಿ ಸಚಿವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಸಿ.ಡಿ ಶಬ್ಧ ಕೇಳಿದರೆ ಸಂಪುಟವೇ ಏಕೆ ಬೆಚ್ಚಿಬೀಳುತ್ತಿದೆ. ಆರು ಸಚಿವರು ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಾಗಿ ತಡೆ ತರುತ್ತಿದ್ದಾರೆ ಏಕೆ’ ಎಂದು ಪ್ರಶ್ನಿಸಿದೆ.

‘ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ. ಆಪರೇಷನ್ ಕಮಲ ಎನ್ನುವುದು ಬಿಜೆಪಿಯ ರಾಜಕೀಯ ವ್ಯಬಿಚಾರ. ಸರ್ಕಾರ ಮೇಲ್ನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ರಚನೆಯಾಗಿಲ್ಲ. ಭೂಗತಲೋಕ, ಬೆದರಿಕೆ, ಹನಿಟ್ರ್ಯಾಪ್, ಬ್ಲಾಕ್‍ಮೇಲ್, ಸಾವಿರಾರು ಕೋಟಿ ಹಗರಣ, ಹೆಣ್ಣು, ಹೆಂಡ ಎಲ್ಲ ಬಳಕೆ ಆಗಿರುವುದು ದೃಢವಾಗುತ್ತಿದೆ’ ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಎಲ್ಲ ಆಯಾಮಗಳಲ್ಲಿ ತನಿಖೆ: ಗೃಹ ಸಚಿವ

ಹಾವೇರಿ: ‘ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ ಬಯಲಿಗೆ ಬಂದ ಮೇಲೆ ಸಾಕಷ್ಟು ಊಹಾಪೋಹಗಳು, ಷಡ್ಯಂತ್ರ, ಹನಿಟ್ರ್ಯಾಪ್‌ ವಿಚಾರಗಳು ಮುನ್ನೆಲೆಗೆ ಬಂದಿವೆ. ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ, ರಾಜಕೀಯದಲ್ಲಿ ಅಸ್ಥಿರತೆ ಉಂಟು ಮಾಡುವ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಂಗದ ಮೊರೆ ಹೋಗಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ರಮೇಶ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಸಂತ್ರಸ್ತೆ ಇನ್ನೂ ಹೇಳಿಕೆ ಕೊಟ್ಟಿಲ್ಲ. ಹೀಗಾಗಿ, ಷಡ್ಯಂತ್ರದ ಸಂಶಯವಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕೆಲವರು 19 ಜನ ಇದ್ದಾರೆ ಅಂತಿದ್ದಾರೆ. ಎಲ್ಲ ವಿಚಾರಗಳನ್ನು ಗಮನಿಸಿ ಎಲ್ಲೆಲ್ಲಿ ತನಿಖೆ ಅಗತ್ಯವಿದೆಯೇ ಅಲ್ಲೆಲ್ಲ ತನಿಖೆ ನಡೆಸುತ್ತೇವೆ’ ಎಂದರು.

ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರುತಿಸಿಕೊಂಡಿರೋ ವಿಚಾರ ಕುರಿತಂತೆ, ‘ಅವರ ದೂರು ಆಧರಿಸಿಯೇ ತನಿಖೆ ನಡೆಯುತ್ತದೆ. ಯಾರ ಜೊತೆ ಗುರುತಿಸಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.