ADVERTISEMENT

‘ಸ್ಕಿಮ್ಮರ್‌’ ಬಳಸಿ ಎಟಿಎಂಗೆ ಕನ್ನ:ರಾಜ್ಯದಲ್ಲಿ ನೈಜೀರಿಯಾ ಗ್ಯಾಂಗ್‌ ಸಕ್ರಿಯ

ದತ್ತಾಂಶ ಕಳವಿಗೆ ‘ಸ್ವೈಪಿಂಗ್‌ ಮಷಿನ್‌’ ಪ್ರೇರಣೆ

ಜಿ.ಬಿ.ನಾಗರಾಜ್
Published 29 ನವೆಂಬರ್ 2019, 8:29 IST
Last Updated 29 ನವೆಂಬರ್ 2019, 8:29 IST
   

ಚಿತ್ರದುರ್ಗ: ‘ಸ್ಕಿಮ್ಮರ್‌ ಉಪಕರಣ’ ಹಾಗೂ ಮೈಕ್ರೊ ಕ್ಯಾಮೆರಾ ಬಳಸಿ ಎಟಿಎಂ ಕಾರ್ಡಿನ ದತ್ತಾಂಶ (ಡಾಟಾ) ಕದ್ದು ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ನೈಜೀರಿಯಾ ಗ್ಯಾಂಗ್‌ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಯ ಗ್ರಾಹಕರನ್ನು ವಂಚಿಸಿದೆ.

ರಾಮನಗರದಲ್ಲಿ ಸೆರೆಸಿಕ್ಕ ಆರೋಪಿಗಳನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಟಿಎಂ ಕಾರ್ಡಿನ ವಿವರಗಳನ್ನು ಕಳವು ಮಾಡಲು ಗ್ಯಾಂಗ್‌ ಕಾರ್ಯನಿರ್ವಹಿಸುತ್ತಿದ್ದ ರೀತಿ ಪೊಲೀಸರನ್ನು ಚಕಿತಗೊಳಿಸಿದೆ.

ನೈಜೀರಿಯಾದ ಸ್ಮಾರ್ಟ್‌ ಈ ಗ್ಯಾಂಗಿನ ಮುಖ್ಯಸ್ಥ. ಬಿಸಿಎ ಪದವೀಧರನಾಗಿರುವ ಈತನೊಂದಿಗೆ ಮ್ಯಾಥ್ಯೂಸ್‌ ಕೈಜೋಡಿಸಿದ್ದ. ಮಹಾರಾಷ್ಟ್ರದ ಅವಿನಾಶ್‌ ಹಾಗೂ ಪ್ರಶಾಂತ್ ಕೂಡ ಜೊತೆಯಾಗಿದ್ದರು. ಬೆಂಗಳೂರು, ಮೈಸೂರು, ರಾಮ ನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇವರ ವಿರುದ್ಧ 35 ಪ್ರಕರಣ ದಾಖಲಾಗಿವೆ.

ADVERTISEMENT

ಸ್ಕಿಮ್ಮರ್‌ ಇಟ್ಟು ಕಾದರು:ಅ.27ರಂದು ಚಿತ್ರದುರ್ಗಕ್ಕೆ ಬಂದ ನಾಲ್ವರು ಆರೋಪಿಗಳು, ಭದ್ರತೆ ಇಲ್ಲದ ಎಟಿಎಂ ಹುಡುಕಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದ ಕೆನರಾ ಬ್ಯಾಂಕಿನ ಎಟಿಎಂ ಇವರ ಕಣ್ಣಿಗೆ ಬಿದ್ದಿದೆ. ಬೆಳಿಗ್ಗೆ 6.20ಕ್ಕೆ ಎಟಿಎಂ ಹೊಕ್ಕ ಸ್ಮಾರ್ಟ್‌ ಮತ್ತು ಮ್ಯಾಥ್ಯೂಸ್‌, ಎಟಿಎಂ ಕಾರ್ಡ್‌ ಹಾಕುವ ಸಾಧನಕ್ಕೆ ‘ಸ್ಕಿಮ್ಮರ್‌’ ಉಪಕರಣ ಅಳವಡಿಸಿದ್ದಾರೆ. ಪಿನ್‌ಕೋಡ್‌ ಒತ್ತುವ ಕೀಪ್ಯಾಡ್‌ ಮೇಲ್ಭಾಗದಲ್ಲಿ ಪುಟ್ಟ ಕ್ಯಾಮೆರಾ ಇಟ್ಟು ಹೊರಬಂದಿದ್ದಾರೆ.

ಮಧ್ಯಾಹ್ನ 1.10ಕ್ಕೆ ಎಟಿಎಂ ಪ್ರವೇಶಿಸಿದ ಪ್ರಶಾಂತ್‌ ಮತ್ತು ಅವಿನಾಶ್ ‘ಸ್ಕಿಮ್ಮರ್‌ ಹಾಗೂ ಕ್ಯಾಮೆರಾ’ ಬಿಚ್ಚಿಕೊಂಡಿದ್ದಾರೆ. ಮಧ್ಯಾಹ್ನದ ಬಳಿಕ ಇವನ್ನು ಸರಸ್ವತಿಪುರಂನಲ್ಲಿರುವ ಎಟಿಎಂಗೆ ಅಳವಡಿಸಿದ್ದಾರೆ. ಹಳೆಯ ಎಟಿಎಂಗಳಿಗೆ ಮಾತ್ರ ‘ಸ್ಕಿಮ್ಮರ್‌’ ಅಳವಡಿಸುವ ಅವಕಾಶವಿದೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ನಕಲಿ ಎಟಿಎಂ ಸೃಷ್ಟಿ:ಎಟಿಎಂಗೆ ಗ್ರಾಹಕರು ಕಾರ್ಡ್‌ ಹಾಕಿದ ತಕ್ಷಣ ಅದರ ದತ್ತಾಂಶ ಸ್ಕಿಮ್ಮರ್‌ಗೆ ರವಾನೆ ಆಗುತ್ತದೆ. ಪಿನ್‌ ಸಂಖ್ಯೆಯನ್ನು ಪುಟ್ಟ ಕ್ಯಾಮೆರಾ ಸೆರೆಹಿಡಿಯುತ್ತದೆ. ಈ ದತ್ತಾಂಶವನ್ನು ಲ್ಯಾಪ್‌ಟಾಪ್‌ಗೆ ವರ್ಗಾಯಿಸಿ ನಕಲಿ ಕಾರ್ಡ್‌ ಸೃಷ್ಟಿಸಿದ್ದಾರೆ. ನಕಲಿ ಎಟಿಎಂ ಕಾರ್ಡ್‌ ಬಳಸಿ ಗ್ರಾಹಕರಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದಾರೆ. ಅ.28 ಹಾಗೂ 29ರಂದು ಎರಡು ದಿನದಲ್ಲಿ ಐವರು ಗ್ರಾಹಕರ ಲಕ್ಷಾಂತರ ರೂಪಾಯಿ ಹಣವನ್ನು ಈ ಗ್ಯಾಂಗ್‌ ಲಪಟಾಯಿಸಿದೆ.

ನಕಲಿ ಎಟಿಎಂ ಕಾರ್ಡ್‌ ಹಿಡಿದು ಹಣ ಬಿಡಿಸಿಕೊಂಡವರೆಲ್ಲರೂ ಮಹಿಳೆಯರು. ಬೆಂಗಳೂರಿನ ಹಲವು ಎಟಿಎಂಗಳಿಂದ ಹಣ ಡ್ರಾ ಆಗಿದೆ. ದಿನಕ್ಕೆ ₹ 10 ಸಾವಿರ ಹಣ ಬಿಡಿಸಿಕೊಳ್ಳುವ ಮಿತಿ ಇರುವುದರಿಂದ ಮಧ್ಯರಾತ್ರಿ 11.55ರಿಂದ 12.05ರ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದೇ ಬಾರಿಗೆ ಎರಡು ದಿನಗಳ ಹಣ ಪಡೆದು ಪರಾರಿಯಾಗಿದ್ದರು.

ರೆಸ್ಟೋರೆಂಟ್‌ನಲ್ಲಿ ಪ್ರಯೋಗ:ನೈಜೀರಿಯಾದ ಸ್ಮಾರ್ಟ್‌ ಹಾಗೂ ಮ್ಯಾಥ್ಯೂಸ್‌ ವೈದ್ಯಕೀಯ ಚಿಕಿತ್ಸಾ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದ ಬಳಿಕ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಬಾಣಸವಾಡಿಯಲ್ಲಿರೆಸ್ಟೋರೆಂಟ್‌ ತೆರೆದಿದ್ದರು. ಹಣ ಪಾವತಿಸುವಾಗ ಗ್ರಾಹಕರು ಬಳಸುವ ‘ಸ್ವೈಪಿಂಗ್‌ ಮಷಿನ್‌’ ದತ್ತಾಂಶಕಳವಿಗೆ ಪ್ರೇರಣೆ ನೀಡಿತು ಎಂಬುದನ್ನು ತನಿಖೆಯ ವೇಳೆ
ಬಾಯ್ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.