ಭೈರಪ್ಪ
ಮೈಸೂರು: ‘ವಿದ್ಯಾರ್ಥಿಯಾಗಿದ್ದಾಗ ಸಿಗರೇಟು ಸೇದುತ್ತಿದ್ದೆ, ನಶ್ಯೆ ಹಾಕುತ್ತಿದ್ದೆ. ಶಿಕ್ಷಕರು ಬುದ್ಧಿವಾದ ಹೇಳಿದ್ದರಿಂದ ಆ ಚಟಗಳಿಂದ ಹೊರ ಬಂದೆ’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ಹೇಳಿಕೊಂಡಿದ್ದರು.
2022ರ ಆ.20ರಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ನಗರದ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸದ್ವಿದ್ಯಾ ಶಾಲೆಯಲ್ಲಿ ಆಯೋಜಿಸಿದ್ದ 92ನೇ ಜನ್ಮ ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಮಾತನಾಡಿದ್ದ ಅವರು, ಬಾಲ್ಯದ ನೆನಪುಗಳಿಗೆ ಜಾರಿದ್ದರು.
‘ಮಾಧ್ಯಮಿಕ ಶಾಲೆಯಲ್ಲಿದ್ದಾಗ ಸ್ವಾಮಿ ಗೌಡ ಎಂಬ ಶಿಕ್ಷಕರು ಸಿಗರೇಟ್ ಸೇದುತ್ತಿದ್ದರು. ಅದನ್ನು ನೋಡುತ್ತಿದ್ದೆವು. ನನ್ನ ಸ್ನೇಹಿತನೊಬ್ಬ ಸಿಗರೇಟು ಸೇದುವುದನ್ನು ಕಲಿಸಿದ್ದ. ಸಿಗರೇಟು ಖರೀದಿಸಲು ಹಣವಿರುತ್ತಿರಲಿಲ್ಲ. ಸ್ವಾಮಿಗೌಡ ಅವರಿಗೆ ಕಾಣದಂತೆ ಅವರಿಂದ 6 ಸಿಗರೇಟ್‌ಗಳನ್ನು ಕದ್ದು ಸೇದಿದ್ದೆ. ಈ ಚಟ ಒಳ್ಳೆಯದಲ್ಲ;ಎದೆಯೊಳಗೆ ಸುಡುತ್ತದೆ. ಅಭ್ಯಾಸವಾದರೆ ಬಿಡಲಾಗುವುದಿಲ್ಲ’ ಎಂದು ಅವರು ತಿಳಿಹೇಳಿದ್ದರು. ನಂತರ ಸಿಗರೇಟು ಮುಟ್ಟಲಿಲ್ಲ’ ಎಂದು ತಿಳಿಸಿದ್ದರು.
‘ಪ್ರೌಢಶಾಲೆಯ ಕೊನೆಯ ಹಂತದಲ್ಲಿ ನಶ್ಯೆ ಹಾಕಿಕೊಳ್ಳುವುದನ್ನು ಸ್ನೇಹಿತ ಕಲಿಸಿಬಿಟ್ಟಿದ್ದ. ಬಿಎ ಆನರ್ಸ್ ಓದುವಾಗ ತರಗತಿಯಲ್ಲಿ ಬಿಡುವಿಲ್ಲದ್ದಕ್ಕೆ ನಶ್ಯೆ ಹಾಕಲಾಗಿರಲಿಲ್ಲ. ಅದರಿಂದ ಮಂಕಾಗಿದ್ದೆ. ಪಾಠವೇ ಅರ್ಥವಾಗುತ್ತಿರಲಿಲ್ಲ. ಅದನ್ನು ಗಮನಿಸಿದ ಉಪನ್ಯಾಸಕರು, ನಶ್ಯೆ ಹಾಕಿಕೊಂಡು ಬಾ ಎಂದು ಹೊರಕ್ಕೆ ಕಳುಹಿಸಿದ್ದರು. ಬಳಿಕ ಬಿಟ್ಟು ಬಿಡುವಂತೆ ಸಲಹೆ ನೀಡಿದ್ದರು. ಕ್ರಮೇಣ ಬಿಟ್ಟೆ’ ಎಂದು ಹಂಚಿಕೊಂಡಿದ್ದರು.
‘ನಾನು ಇಷ್ಟು ವರ್ಷ ಬದುಕಿರಲು ದುಶ್ಚಟಗಳು ಇಲ್ಲದಿರುವುದೇ ಕಾರಣ. ಕಾಫಿ-ಟೀ ಕುಡಿಯುವುದಿಲ್ಲ. ಹೀಗಾಗಿ ನಾನು ಒಂಬತ್ತು ದಶಕಗಳನ್ನು ಕಳೆದಿದ್ದೀನಿ. ಕಾಯಿಲೆಗಳಿಗೆ ಅವಕಾಶ ಕೊಡದಂತೆ ಅಭ್ಯಾಸಗಳನ್ನು ಇಟ್ಟುಕೊಳ್ಳಬೇಕು’ ಎಂದು ಹೇಳಿದ್ದರು.
‘ಪ್ರೌಢಶಾಲೆ ಮಟ್ಟದಲ್ಲಿ ಮಕ್ಕಳಿಗೆ ಏನು ಆಸಕ್ತಿ ಬೆಳೆಸುತ್ತೇವೆ ಎನ್ನುವುದು ಮುಖ್ಯ. ಕಾಲೇಜು ಉಪನ್ಯಾಸಕರು ಯಾವುದೋ ಸಿದ್ಧಾಂತದಲ್ಲಿ ಮುಳುಗಿರುತ್ತಾರೆ ಅಥವಾ ಬರಡಾಗಿರುತ್ತಾರೆ. ಸಾಹಿತ್ಯದ ರಸ ಅನುಭವಿಸುವುದು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದ್ದರು.
‘ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ, ಮೌಲ್ಯಗಳು ಯಾವುವು ಎನ್ನುವುದನ್ನು ತಿಳಿಯಬೇಕು. ಇಲ್ಲದಿದ್ದರೆ ಅದು ಕೇವಲ ಕತೆಯಾಗುತ್ತದೆ. ರಾಮಾಯಣ ಮಹಾಭಾರತವು ವೇದಕ್ಕೆ ಸಮಾನವಾದುದು. ಜೀವನದ ಮೌಲ್ಯಗಳು ಹೇಗಿರಬೇಕು ಎನ್ನುವುದನ್ನು ಚೆನ್ನಾಗಿ ತಿಳಿಸಿಕೊಡಲಾಗಿದೆ’ ಎಂದು ಹೇಳಿದ್ದರು.
ಇದೇ ಮೊದಲಿಗೆ ಜನ್ಮ ದಿನಾಚರಣೆ ಮಾಡಿಕೊಂಡಿರುವೆ...: ‘ನನಗೆ ಜನ್ಮ ದಿನ ಆಚರಿಸಿಕೊಳ್ಳುವ ಅಭ್ಯಾಸವಿಲ್ಲ. ಕಸಾಪ ಜಿಲ್ಲಾ ಘಟಕದವರಿಂದಾಗಿ ಇದೇ ಮೊದಲ ಬಾರಿಗೆ ಪಾತ್ರವಾಗಿದ್ದೇನೆ. ಹೀಗೆ ಆಚರಿಸುವವರು ಚಿಕ್ಕಂದಿನಿಂದಲೂ ಯಾರೂ ಇರಲಿಲ್ಲ. ಅಲ್ಲದೇ, ನನಗೆ ಜನ್ಮ ದಿನಾಂಕದ ಬಗ್ಗೆಯೇ ಅನುಮಾನವಿದೆ. ಶಾಲಾ ದಾಖಲಾತಿಗಳಲ್ಲಿ ಆ.20 ಎಂದು ನಮೂದಾಗಿದೆಯಷ್ಟೆ’ ಎಂದು ಭೈರಪ್ಪ ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.