ADVERTISEMENT

ಇನ್ನೂ ವಿಸರ್ಜನೆಯಾಗಿಲ್ಲ ಯೋಧ ಗುರು ಚಿತಾಭಸ್ಮ: ಬಿಎಸ್‌ವೈಗೆ ಎಸ್‌.ಎಂ.ಕೃಷ್ಣ ಪತ್ರ

ಶೀಘ್ರ ಸ್ಮಾರಕ ನಿರ್ಮಿಸಿ, ಚಿತಾಭಸ್ಮ ವಿಸರ್ಜನೆ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 12:54 IST
Last Updated 16 ಫೆಬ್ರುವರಿ 2020, 12:54 IST
ಎಸ್‌.ಎಂ.ಕೃಷ್ಣ ಪತ್ರ
ಎಸ್‌.ಎಂ.ಕೃಷ್ಣ ಪತ್ರ   
""

ಮಂಡ್ಯ: ಮದ್ದೂರು ತಾಲ್ಲೂಕು ಗುಡಿಗೆರೆ ಕಾಲೊನಿ ಯೋಧ ಎಚ್‌.ಗುರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿ ವರ್ಷ ಕಳೆದರೂ ಜಿಲ್ಲಾಡಳಿತ ಅವರ ಚಿತಾಭಸ್ಮ ವಿಸರ್ಜನೆ ಮಾಡಿಲ್ಲ. ಶೀಘ್ರ ಸ್ಮಾರಕ ನಿರ್ಮಿಸಿ, ಚಿತಾಭಸ್ಮ ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿಯ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದ್ದಾರೆ.

ದೇಶದ ಅತ್ಯಂತ ಘೋರ ಭಯೋತ್ಪಾದನಾ ದಾಳಿಯಲ್ಲಿ ಮಡಿದ ವೀರ ಯೋಧರಿಗಾಗಿ ಇಡೀ ದೇಶ ಮಿಡಿದಿತ್ತು. ವೀರ ಮರಣವನ್ನಪ್ಪಿದ ಕರ್ನಾಟಕದ ಯೋಧ ಎಚ್‌.ಗುರು ಚಿತಾಭಸ್ಮವನ್ನು ಜಿಲ್ಲಾಡಳಿತ ವಿಸರ್ಜನೆ ಮಾಡದಿರುವುದು ಖಂಡನೀಯ. ಆಡಳಿತ ವರ್ಗದ ನಿರ್ಲಕ್ಷ್ಯ ಸಾರ್ವಜನಿಕರ ಅವಕೃಪೆಗೆ ಒಳಗಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಧನ ಬಲಿದಾನ, ಸ್ಮಾರಕ ನಿರ್ಮಾಣ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು. ಸರ್ಕಾರ, ಅಧಿಕಾರಿ ವರ್ಗ ಅದನ್ನು ಕಾರ್ಯರೂಪಕ್ಕೆ ಇಳಿಸದಿರುವುದು ಸರಿಯಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಯಾದ ಕಾವೇರಿ ನೀರಾವರಿ ನಿಗಮದ ಮೂಲಕ ತುರ್ತಾಗಿ ವೀರ ಯೋಧನ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿ ಅದರ ನಿರ್ವಹಣೆ ಮಾಡಬೇಕು. ಅಲ್ಲಿ ಯೋಧನ ಬಲಿದಾನವನ್ನು ನೆನೆಯುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಅಂತ್ಯ ಸಂಸ್ಕಾರ ಮುಗಿದು ವರ್ಷ ಕಳೆದರೂ ಯಾವ ಕಾರಣಕ್ಕೆ ಚಿತಾಭಸ್ಮ ವಿಸರ್ಜನೆ ಮಾಡಿಲ್ಲ ಎಂಬುದನ್ನು ಪತ್ತೆ ಮಾಡಬೇಕು. ಕೂಡಲೇ ಶಾಸ್ತ್ರೋಕ್ತವಾಗಿ ವಿಸರ್ಜನೆ ಮುಗಿಸಿ ಅಗಲಿದ ಯೋಧನ ಆತ್ಮಕ್ಕೆ ಗೌರವ ಸಲ್ಲಿಸಬೇಕು. ಈ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

‘ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸಮಾಧಿ ನಿರ್ಮಾಣ ಆಗಿಲ್ಲದ ಕಾರಣ ಚಿತಾಭಸ್ಮ ವಿಸರ್ಜನೆ ಮಾಡಲು ಸಾಧ್ಯವಾಗಿಲ್ಲ. ತಕ್ಷಣಕ್ಕೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದಿಂದ ಸಮಾಧಿ ನಿರ್ಮಿಸಿ ಶಾಸ್ತ್ರೋಕ್ತವಾಗಿ ಚಿತಾಭಸ್ಮ ವಿಸರ್ಜನೆ ಮಾಡಲಾಗುವುದು. ನಂತರ ಸ್ಮಾರಕ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಎಚ್‌.ಗುರು ಚಿತಾಭಸ್ಮವನ್ನು ಗುಡಿಗೆರೆ ಕಾಲೊನಿಯ ಅವರ ನಿವಾಸದಲ್ಲಿ ಮೂಟೆಕಟ್ಟಿ ಇಡಲಾಗಿದೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು. ಕಳೆದ ಫೆ.16ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾಡಳಿತ ವತಿಯಿಂದ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಕಲಾವತಿ ಪೂಜೆ: ಎಚ್‌.ಗುರು ಪತ್ನಿ ಕಲಾವತಿ ಭಾನುವಾರ ಸಮಾಧಿ ಸ್ಥಳಕ್ಕೆ ಬಂದು ಪ್ರಥಮ ವರ್ಷದ ಪುಣ್ಯಸ್ಮರಣೆ ಆಚರಿಸಿದರು. ಕಳೆದ ವರ್ಷ ಫೆ.14ರಂದು ಯೋಧ ಮೃತಪಟ್ಟ ಹಿನ್ನೆಲೆಯಲ್ಲಿ ಯೋಧನ ಪೋಷಕರು ಶುಕ್ರವಾರವೇ ಪ್ರಥಮ ಪುಣ್ಯಸ್ಮರಣೆ ಆಚರಣೆ ಮಾಡಿದ್ದರು. ಫೆ.16ಕ್ಕೆ ಅಂತ್ಯಸಂಸ್ಕಾರ ಮುಗಿದು ವರ್ಷವಾಗಿದ್ದು ಕಲಾವತಿ ಪ್ರತ್ಯೇಕವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯೋಧನ ಪೋಷಕರು ಹಾಜರಿರಲಿಲ್ಲ.

ಯೋಧ ಎಚ್‌.ಗುರು ಪುಣ್ಯಸ್ಮರಣೆ ಅಂಗವಾಗಿ ಯೋಧನ ಪತ್ನಿ ಕಲಾವತಿ ಭಾನುವಾರ ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.