ADVERTISEMENT

3 ಕಡೆ ಸೋಲಾರ್‌ ಪಾರ್ಕ್‌: ಸಚಿವ ಭಗವಂತ ಖೂಬಾ

ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ಖಾಸಗಿ ಸಹಭಾಗಿತ್ವದಲ್ಲಿ ₹4,800 ಕೋಟಿ ಯೋಜನಾ ವೆಚ್ಚದಲ್ಲಿ ಕೊಪ್ಪಳ, ಬಾಗಲಕೋಟೆ ಹಾಗೂ ಬೀದರ್ ಜಿಲ್ಲೆಯ ಔರಾದ್‌ನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾಹೇಳಿದರು.

‘ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಆರಂಭಿಕ ಸರಾಸರಿ ₹3.75 ಕೋಟಿಯಿಂದ ₹4 ಕೋಟಿ ವೆಚ್ಚವಾಗಲಿದೆ. ಪ್ರತಿಯೊಂದು ಪಾರ್ಕ್‌ನಲ್ಲಿ 1,200 ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು’ ಎಂದು ಮಂಗಳವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಕೊಪ್ಪಳದಲ್ಲಿ 15 ಸಾವಿರ ಎಕರೆ, ಬಾಗಲಕೋಟೆಯಲ್ಲಿ 9,600 ಎಕರೆ ಜಾಗ ಗುರುತಿಸಲಾಗಿದೆ. ಔರಾದ್‌ನಲ್ಲಿ ರೈತರ ಜಮೀನುಗಳನ್ನು 25 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದು ಅವರಿಗೆ ಪ್ರತಿ ಎಕರೆಗೆ ವರ್ಷಕ್ಕೆ ₹ 25 ಸಾವಿರ ಕೊಡಲಾಗುವುದು. ಪಾರ್ಕ್‌ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ‘ ಎಂದರು.

ADVERTISEMENT

‘ರಾಷ್ಟ್ರೀಯ ಸೋಲಾರ್ ನೀತಿಯನ್ನು ಪರಿಷ್ಕರಿಸಲಾಗುವುದು. ಸೋಲಾರ್‌ ಪಾರ್ಕ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ಅನ್ನು ವಿದ್ಯುತ್‌ ಕಂಪನಿಗಳು ಕಡ್ಡಾಯವಾಗಿ ಖರೀದಿಸುವಂತೆ ಆದೇಶ ಹೊರಡಿಸಲಾಗುವುದು. ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದೇ ಇದರ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಫಾರ್ಮಾ ಪಾರ್ಕ್‌:
‘ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಫಾರ್ಮಾ ಪಾರ್ಕ್‌ ನಿರ್ಮಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಜಮೀನು ಹಾಗೂ ಮೂಲಸೌಕರ್ಯ ಒದಗಿಸಬೇಕಾಗಲಿದೆ. ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಮಂಗಳೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಪ್ರಸ್ತಾವ ಬಂದಿದ್ದು, ಶೀಘ್ರ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು’ ಎಂದು ಖೂಬಾ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.