ADVERTISEMENT

ಕರಾವಳಿ ಪ್ರವಾಸೋದ್ಯಮ ಸರ್ಕೀಟ್‌ ಯೋಜನೆ ರೂಪಿಸಿ: ಯು.ಟಿ. ಖಾದರ್‌ ಸಲಹೆ

ಸರ್ಕಾರಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 15:42 IST
Last Updated 5 ಡಿಸೆಂಬರ್ 2023, 15:42 IST
ಯು.ಟಿ ಖಾದರ್‌
ಯು.ಟಿ ಖಾದರ್‌   

ವಿಧಾನಸಭೆ(ಬೆಳಗಾವಿ): ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕವಾದ ‘ಕರಾವಳಿ ಪ್ರವಾಸೋದ್ಯಮ ಸರ್ಕೀಟ್‌ ಯೋಜನೆ’ ರೂಪಿಸಿ, ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪ್ರಶ್ನೆಗೆ ಮಂಗಳವಾರ ಉತ್ತರ ನೀಡಿದ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ, ‘ರಾಜ್ಯದಲ್ಲಿ 26 ಕಡೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಹೂಡಿಕೆ ಆಕರ್ಷಿಸುವ ಪ್ರಸ್ತಾವವಿದೆ. ಸಾಹಸ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು’ ಎಂದರು.

ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಕೆಲವು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮದಿಂದ ಹೆಚ್ಚು ಆದಾಯ ಗಳಿಸಲಾಗುತ್ತಿದೆ. ನೆರೆಯ ಕೇರಳ ಮತ್ತು ಗೋವಾದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜ್ಯದಲ್ಲೂ ಅಂತಹ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಮ್ಮಲ್ಲಿ ಪ್ರವಾಸಿಗರು ಕೇರಳಕ್ಕೆ ಹೋಗುತ್ತಾರೆ. ಅಲ್ಲಿಂದ ರೈಲು ಹತ್ತಿ ಗೋವಾಕ್ಕೆ ಹೋಗುತ್ತಾರೆ. ಕರ್ನಾಟಕದಲ್ಲಿ ಉದ್ದದ ಕರಾವಳಿ ಪ್ರದೇಶವಿದ್ದರೂ ಪ್ರವಾಸಿಗರ ಸಂಖ್ಯೆ ಕಡಿಮೆ. ಪರಿಸರ ಮತ್ತು ಸಾಹಸ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲು ಕರಾವಳಿ ಪ್ರವಾಸೋದ್ಯಮ ಸರ್ಕೀಟ್‌ ಯೋಜನೆ ರೂಪಿಸಿ. ಕರಾವಳಿಯ ಶಾಸಕರ ಜತೆ ಸಭೆ ನಡೆಸಿ, ಯೋಜನೆ ಅಂತಿಮಗೊಳಿಸಿ’ ಎಂದು ಸಚಿವ ಎಚ್.ಕೆ. ಪಾಟೀಲ ಅವರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.