ADVERTISEMENT

ಪ್ರವಾಹ ನಿರ್ವಹಣೆಗೆ ವಿಶೇಷ ನೆರವು: ಕೇಂದ್ರಕ್ಕೆ ಎಚ್‌.ಡಿ.ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 9:17 IST
Last Updated 7 ಆಗಸ್ಟ್ 2020, 9:17 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು: ಪ್ರವಾಹ ಪೀಡಿತ ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವೂ ಈ ಸಂಬಂಧ ಕೇಂದ್ರ ಮೇಲೆ ಒತ್ತಡ ಹಾಕಬೇಕು, ಕೂಡಲೇ ಪರಿಹಾರ ಕಾರ್ಯ ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್‌ ಪ್ರಕರಣಗಳು ಮೇರೆ ಮೀರಿರುವ ಸಂದರ್ಭದಲ್ಲೇ ರಾಜ್ಯವು ಅತಿವೃಷ್ಟಿಗೆ ಸಿಲುಕಿದೆ. ಇದರಿಂದ ಜನತೆ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್‌ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ಬರದ ಮುಂಗಾರಿನಿಂದ ಎಲ್ಲ ಜಿಲ್ಲೆಗಳೂ ತತ್ತರಿಸಿ ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ಜತೆಗೆ ನಿಲ್ಲುತ್ತೇವೆ. ಜನತೆ ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ADVERTISEMENT

ರಾಜ್ಯದ ಅತಿವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಬೇಕಾಗಿದೆ. ಸರ್ಕಾರ ತಡ ಮಾಡದೇ ಈ ಕಾರ್ಯವನ್ನು ಮಾಡಬೇಕು ಎಂದು ದೇವೇಗೌಡ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಬೆಳೆಗಳು ಹಾನಿಗೊಳಲಾಗಿವೆ. ಮನೆ–ಮಠಗಳನ್ನು ಕಳೆದುಕೊಂಡವರಿಗೆ ತಡ ಮಾಡದೇ ಪರಿಹಾರ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.