ಬೆಂಗಳೂರು: ಗುರುವಾರ ನಡೆದ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲರ ಮಧ್ಯೆ ವಾಗ್ವಾದ ನಡೆದಿದೆ.
ಸಂಪುಟ ಸಭೆಗೂ ಮುನ್ನ ಎಂ.ಬಿ.ಪಾಟೀಲ ಅವರ ನಿವಾಸದಲ್ಲಿ ಲಿಂಗಾಯತ ಸಚಿವರ ಸಭೆ ನಡೆದಿತ್ತು. ‘ಸಮೀಕ್ಷಾ ವರದಿಯನ್ನು ಈಗಿರುವಂತೆ ಒಪ್ಪಿಕೊಂಡರೆ ಇದರಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಇದನ್ನು ಸಂಪುಟ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಸಂಪುಟ ಸಭೆ ಆರಂಭವಾದಾಗ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸಮುದಾಯದ ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಆಗ ಮಾತನಾಡಿದ ಶಿವಾನಂದ ಪಾಟೀಲ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೋಗಿ 2018 ರ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿತು. ಪಕ್ಷದ ಬಹುತೇಕ ಶಾಸಕರು, ಸಚಿವರು ಸೋಲು ಅನುಭವಿಸಿದರು ಎಂದು ಸಭೆಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಂ.ಬಿ.ಪಾಟೀಲ ಅವರು ಶಿವಾನಂದ ಪಾಟೀಲರ ಮಾತನ್ನು ಒಪ್ಪಲಿಲ್ಲ. ಪ್ರತ್ಯೇಕ ಧರ್ಮದ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರಿದ್ದರೆ ಎಂ.ಬಿ.ಪಾಟೀಲ ಅವರೂ ಸೋಲಬೇಕಿತ್ತು. ಅವರು ಅತಿ ಹೆಚ್ಚು ಮತಗಳಿಂದ ಗೆದ್ದಿದ್ದಾರಲ್ಲ. ನಿಮ್ಮ ಮಾತನ್ನು ಒಪ್ಪಲಾರೆ’ ಎಂದು ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.
‘ಎಂ.ಬಿ.ಪಾಟೀಲ ಒಬ್ಬರು ಗೆದ್ದಿರಬಹುದು. ಆದರೆ ಉಳಿದ ಶಾಸಕರು ಏನಾದರು? ಎಷ್ಟು ಜನ ಗೆದ್ದಿದ್ದಾರೆ? ಆದ್ದರಿಂದ ಪಕ್ಷದ ಮೇಲೆ ಪರಿಣಾಮ ಬೀರಬಹುದು. ಎಚ್ಚರಿಕೆ ವಹಿಸಬೇಕು’ ಎಂಬುದಾಗಿ ಶಿವಾನಂದ ಪಾಟೀಲ ಹೇಳಿದರೆಂದು ಮೂಲಗಳು ಹೇಳಿವೆ.
‘ಚುನಾವಣೆಗೂ ಪ್ರತ್ಯೇಕ ಧರ್ಮದ ವಿಚಾರಕ್ಕೂ ಸಂಬಂಧವಿಲ್ಲ. ಚುನಾವಣೆ ಸೋತಿದ್ದು ಬೇರೆಯದ್ದೇ ಕಾರಣಗಳಿಗೆ’ ಎಂದು ಎಂ.ಬಿ.ಪಾಟೀಲ ತಿರುಗೇಟು ನೀಡಿದರು.
ಆಗ ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಅವರು, ಹಿಂದೆ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿ ಚುನಾವಣೆ ಎದುರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೋತು ಹೋಯಿತು. 30–35 ಶಾಸಕರು ಮಾತ್ರ ಗೆದ್ದಿದ್ದರು. ಆದ್ದರಿಂದ ಚುನಾವಣೆಗೂ ಈ ರೀತಿಯ ವಿಷಯಗಳಿಗೂ ಸಂಬಂಧವಿಲ್ಲ. ಚುನಾವಣೆ ಸೋಲು ಗೆಲುವಿಗೆ ಬೇರೆಯದೇ ಆದ ಕಾರಣಗಳಿರುತ್ತವೆ ಎಂದು ಹೇಳಿದ್ದಾಗಿ ಮೂಲಗಳು ಹೇಳಿವೆ.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿ, ಜಾತಿ ಗಣತಿ ವರದಿಯನ್ನು ಒಪ್ಪಿಕೊಂಡರೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಇದನ್ನು ಯಾರೂ ಒಪ್ಪಲು ತಯಾರಿಲ್ಲ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.