ADVERTISEMENT

ವಿಶೇಷ ಮಕ್ಕಳತ್ತ ಸರ್ಕಾರದ ನಿರ್ಲಕ್ಷ್ಯ !

ದಿನಸಿ ಕಿಟ್‌ ಕೂಡ ವಿತರಿಸಿಲ್ಲ * ಪೋಷಣಾ ಭತ್ಯೆ ಯಾವುದಕ್ಕೂ ಸಾಲುವುದಿಲ್ಲ

ಗುರು ಪಿ.ಎಸ್‌
Published 17 ಜುಲೈ 2021, 20:42 IST
Last Updated 17 ಜುಲೈ 2021, 20:42 IST
ವಿಶೇಷ ಮಕ್ಕಳ ಶಿಕ್ಷಣ–ಪ್ರಾತಿನಿಧಿಕ ಚಿತ್ರ
ವಿಶೇಷ ಮಕ್ಕಳ ಶಿಕ್ಷಣ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಗದೇ ವಿಶೇಷ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅವರ ಕಲಿಕೆಯೂ ಕಷ್ಟವಾಗಿರುವ ಈ ಸಂದರ್ಭದಲ್ಲಿ, ಕನಿಷ್ಠ ದಿನಸಿ ಕಿಟ್‌ ವಿತರಿಸುವ ಕಾರ್ಯವನ್ನೂ ಸರ್ಕಾರ ಮಾಡುತ್ತಿಲ್ಲ ಎಂದು ಪೋಷಕರು, ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಾಕ್‌ ಮತ್ತು ಶ್ರವಣ ದೋಷ ಸೇರಿದಂತೆ ಬೇರೆ ಬೇರೆ ರೀತಿಯ ಅಂಗವೈಕಲ್ಯ ಹೊಂದಿರುವ ಮಕ್ಕಳು ಕೋವಿಡ್‌ ಬಿಕ್ಕಟ್ಟಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಾದರೆ ಕನಿಷ್ಠ ದಿನಸಿ ಕಿಟ್‌ ಆದರೂ ಕೊಟ್ಟಿದ್ದಾರೆ. ಇಂತಹ ಮಕ್ಕಳಿಗೆ ಅದೂ ಇಲ್ಲ’ ಎಂದು ನಗರದ ಸುನಾದ ಕಿವುಡು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಂ. ದಾಕ್ಷಾಯಿಣಿ ಹೇಳಿದರು.

ADVERTISEMENT

‘ಇಂತಹ ಮಕ್ಕಳ ಮನೆಯ ವಿಳಾಸ, ದೂರವಾಣಿ ಸಂಖ್ಯೆಯು ಸರ್ಕಾರದ ಬಳಿ ಇದೆ. ದಿನಸಿ ಕಿಟ್‌ ಸೇರಿದಂತೆ ಇತರೆ ಸೌಲಭ್ಯವನ್ನು ಅವರ ಮನೆಯ ಬಾಗಿಲಿಗೇ ತಲುಪಿಸುವುದು ಕಷ್ಟವೇನೂ ಆಗದು. ಅಲ್ಲದೆ, ಶೇ 100ರಷ್ಟು ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ₹1,400 ಪೋಷಣಾ ಭತ್ಯೆಯನ್ನು ನೀಡಲಾಗುತ್ತದೆ. ಆದರೆ, ಈ ಮಕ್ಕಳ ನಿರ್ವಹಣೆಗೆ ಅದು ಏನೇನೂ ಸಾಲುವುದಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಾದರೂ ಪೋಷಣಾ ಭತ್ಯೆಯನ್ನು ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸಾಮಾನ್ಯ ಶಾಲೆಗಳ ಮಾರ್ಗಸೂಚಿಯಂತೆಯೇ ಕಾರ್ಯನಿರ್ವಹಿಸಲು ಹಲವು ಸವಾಲುಗಳು ಎದುರಾಗುತ್ತವೆ. ತುಟಿಚಲನೆಯಿಂದಲೇ ಮಾತುಗಳನ್ನು ಗ್ರಹಿಸುವ ಮಕ್ಕಳಿಗೆ ಮಾಸ್ಕ್‌ ಧರಿಸುವುದರಿಂದ ಕಷ್ಟವಾಗುತ್ತಿದೆ. ಎಷ್ಟೋ ವಿದ್ಯಾರ್ಥಿಗಳ ಬಳಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಇಲ್ಲ. ಆನ್‌ಲೈನ್‌ ತರಗತಿ ನಡೆಸುವುದೂ ಕಷ್ಟವಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಊಟ, ಉಪಾಹಾರ ಭತ್ಯೆ ಎಂದು ಪ್ರತ್ಯೇಕವಾಗಿ ಹಣ ನೀಡಲಾಗುತ್ತಿತ್ತು. ಈಗ ಭೌತಿಕ ತರಗತಿಗಳು ನಡೆಯುತ್ತಿಲ್ಲವಾದ್ದರಿಂದ ಶಾಲೆಯ ನಿರ್ವಹಣಾ ವೆಚ್ಚ ಮಾತ್ರ ಕೊಡುತ್ತಿದ್ದಾರೆ. ಶಾಲಾ ವಾಹನದ ಚಾಲಕರು, ಸಹಾಯಕರು ಸೇರಿದಂತೆ ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಅವರು ಕೆಲಸ ಬಿಟ್ಟು ಹೋದರೆ, ಕೋವಿಡ್‌ ಬಿಕ್ಕಟ್ಟು ಪರಿಹಾರದ ನಂತರ ಅವರನ್ನು ವಾಪಸ್‌ ಕರೆಸಿಕೊಳ್ಳಲು ಕಷ್ಟವಾಗುತ್ತದೆ’ ಎಂದು ನಗರದ ಚಂದ್ರಶೇಖರ್ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್ ಅಂಡ ಹಿಯರಿಂಗ್‌ನ ಸಂಚಾಲಕಿ ರತ್ನಾ ಶೆಟ್ಟಿ ಹೇಳಿದರು.

‘ವಿಶೇಷ ಮಕ್ಕಳ ಪೋಷಕರಿಗೆ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದರು.

‘ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ–ಶಿಕ್ಷಕಿಯರ ವೇತನವೂ ತುಂಬಾ ಕಡಿಮೆ (₹14,000) ಇದೆ. ವೇತನ ಹೆಚ್ಚಿಸಿದರೆ ಅನುಕೂಲವಾಗುತ್ತದೆ’ ಎಂದು ಶಿಕ್ಷಕಿಯೊಬ್ಬರು ಮನವಿ ಮಾಡಿದರು.

‘ಪೋಷಣಾ ಭತ್ಯೆ ಹೆಚ್ಚಳಕ್ಕೆ ಶಿಫಾರಸು’

‘ಕೋವಿಡ್‌ ಸಂದರ್ಭದಲ್ಲಿ ವಿಶೇಷ ಮಕ್ಕಳ ಶಾಲಾ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹಲವು ಸರ್ಕಾರೇತರ ಸಂಸ್ಥೆಗಳು ಮನವಿ ಮಾಡಿದ್ದವು. ಈ ಕುರಿತು ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪೋಷಣಾ ಭತ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆ ದೊರೆತರೆ, ಭತ್ಯೆ ಪ್ರಮಾಣ ಹೆಚ್ಚಾಗಲಿದೆ’ ಎಂದು ಅಂಗವಿಕಲರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಮುನಿರಾಜು ‘ಪ್ರಜಾವಾಣಿ‌’ಗೆ ತಿಳಿಸಿದರು.

‘ಮಾನಸಿಕ ಸಮಸ್ಯೆ ಅಥವಾ ಬುದ್ಧಿಮಾಂದ್ಯ ಮಕ್ಕಳ ಪೋಷಣಾ ಭತ್ಯೆಯ ಪ್ರಮಾಣವನ್ನು ₹2,000ಕ್ಕೆ ಹೆಚ್ಚಿಸಿ ಮುಖ್ಯಮಂತ್ರಿಗಳು ಈಗಾಗಲೇ ಆದೇಶಿಸಿದ್ದಾರೆ. ನಿರ್ದಿಷ್ಟ ವರ್ಷಗಳ ನಂತರ ಭತ್ಯೆಯ ಪ್ರಮಾಣ ನಿಗದಿತವಾಗಿ ಹೆಚ್ಚಾಗೇ ಆಗುತ್ತದೆ. ಕೋವಿಡ್ ಬಿಕ್ಕಟ್ಟು ಇರುವುದರಿಂದ ಈಗಲೇ ಭತ್ಯೆ ಹೆಚ್ಚಳ ಮಾಡಬೇಕು ಎಂದು ಇಲಾಖೆಯಿಂದಲೂ ಮನವಿ ಮಾಡಿದ್ದೇವೆ’ ಎಂದೂ ಅವರು ಹೇಳಿದರು.

ಅಂಕಿ–ಅಂಶ

27 - ಬೆಂಗಳೂರಿನಲ್ಲಿರುವ ವಿಶೇಷ ಮಕ್ಕಳ ಶಾಲೆಗಳು

2,000 - ಬೆಂಗಳೂರಿನಲ್ಲಿರುವ ವಿಶೇಷ ಮಕ್ಕಳ ಅಂದಾಜು ಸಂಖ್ಯೆ

140 - ರಾಜ್ಯದಲ್ಲಿರುವ ವಿಶೇಷ ಶಾಲೆಗಳು

10,000 - ರಾಜ್ಯದಲ್ಲಿರುವ ವಿಶೇಷ ಮಕ್ಕಳ ಅಂದಾಜು ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.