ADVERTISEMENT

‘ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಅಯ್ಯಪ್ಪ ಭಕ್ತರ ಸಂಘಟನೆ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 11:05 IST
Last Updated 17 ನವೆಂಬರ್ 2018, 11:05 IST
ಎಸ್.ಆರ್.ಶ್ರೀನಿವಾಸ್
ಎಸ್.ಆರ್.ಶ್ರೀನಿವಾಸ್   

ತುಮಕೂರು: ದಕ್ಷಿಣ ಭಾರತದಲ್ಲಿ ಅಯ್ಯಪ್ಪನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ‌. ಕೇರಳದಲ್ಲಿ‌ ಬಿಜೆಪಿ ಪಕ್ಷಕ್ಕೆ ನೆಲೆಯಿಲ್ಲ. ಹಾಗಾಗಿ ನೆಲೆ ಕಂಡುಕೊಳ್ಳಲು ಅಯ್ಯಪ್ಪ ಭಕ್ತರನ್ನುಸಂಘಟಿಸಲು ಮುಂದಾಗಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಶಬರಿಮಲೆ ಗುರು ಸ್ವಾಮಿ ಸಂಘಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೀಡಿದ ಹೇಳಿಕೆ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಬಿಜೆಪಿಯವರಿಗೆ ಇದೇನೂ ಹೊಸದಲ್ಲ. ಅವರ ಯೋಗ್ಯತೆಯನ್ನು ಜನರು ಹಿಂದಿನಿಂದಲೂ ನೋಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಬಿಜೆಪಿಯವರು ಪಕ್ಷವನ್ನು ಹೇಗೆ ಕಟ್ಟಿದರು ಎಂಬುದನ್ನು ಅವರ ಹಿಂದಿನ ನಡವಳಿಕೆ ಗಮನಿಸಿದರೆ ಗೊತ್ತಾಗುತ್ತದೆ. ಎಲ್‌.ಕೆ.ಅಡ್ವಾಣಿ ಅವರು ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿ ದೇಶವ್ಯಾಪಿ ಸಂಚರಿಸಿದ್ದರಿಂದ ಬಿಜೆಪಿ ಟೇಕಾಫ್ ಆಗಿತ್ತು’ ಎಂದರು.

‘ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಠಗಳಿಗೆ ಭೇಟಿ ನೀಡಿದರು.‌ ಸ್ವಾಮೀಜಿಗಳನ್ನು ಒಂದು ಗೂಡಿಸಿದರು. ರಾಜ್ಯ ಸುತ್ತಿ ಜಾತಿಗಳನ್ನು ಒಂದು ಗೂಡಿಸಿದರು. ಅಲ್ಲದೇ, ಕರಾವಳಿ ಭಾಗದಲ್ಲಿ ಯಾರೇ ಯಾವುದೇ ಕಾರಣಕ್ಕೆ ಸತ್ತರೆ ಅವರ ಹೆಣಗಳನ್ನು ತಂದಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಸಿದರು. ಬಿಜೆಪಿಯವರಿಗೆ ಇಂಥದ್ದನ್ನು ಬಿಟ್ಟರೆ ಬೇರೆ ಅಜೆಂಡಾವೇಇಲ್ಲ’ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.