ADVERTISEMENT

ಶ್ರೀನಿವಾಸಮೂರ್ತಿ ನೇತೃತ್ವದ‌ ಸಮಿತಿ ವರದಿ: ಚರ್ಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ವಾರ್ತಾ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಸಮಗ್ರ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 16:12 IST
Last Updated 18 ಜನವರಿ 2026, 16:12 IST
ದಿನೇಶ್ ಗೂಳಿಗೌಡ
ದಿನೇಶ್ ಗೂಳಿಗೌಡ   

ಬೆಂಗಳೂರು: ವಾರ್ತಾ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ‌ ಸಮಿತಿ ಸಲ್ಲಿಸಿದ ವರದಿ ಜಾರಿ ಕುರಿತಂತೆ ಚರ್ಚಿಸಲು ವಾರ್ತಾ ಇಲಾಖೆಯ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಸಮಿತಿಯ ವರದಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ ಗೂಳಿಗೌಡ ಮನವಿ ಸಲ್ಲಿಸಿದ್ದರು.

ಮನವಿಯಲ್ಲಿ ಏನಿದೆ?

ADVERTISEMENT

‘ವಾರ್ತಾ ಇಲಾಖೆಗೆ 1978ರಲ್ಲಿ ಅಳವಡಿಸಿಕೊಂಡಿದ್ದ ವೃಂದ ಮತ್ತು ನೇಮಕಾತಿ ನಿಯಮವು ಅವೈಜ್ಞಾನಿಕವಾಗಿದ್ದು, ಅದನ್ನು ಇಲಾಖೆ ಸರಿಪಡಿಸಿಲ್ಲ. ಇದರಿಂದಾಗಿ ಇಲಾಖೆಯ ಸಿಬ್ಬಂದಿ 15-20 ವರ್ಷಗಳಿಂದ ಬಡ್ತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ವೃಂದ ಮತ್ತು ನೇಮಕಾತಿ ನಿಯಮದ ಕರಡು ಪ್ರಸ್ತಾವವನ್ನು ಎಲ್ಲ ನೌಕರರಿಗೆ ನೀಡಿ, ತಕರಾರು, ಸಲಹೆ,‌ ಸೂಚನೆಗಳನ್ನು ಲಿಖಿತವಾಗಿ ಪಡೆದುಕೊಳ್ಳಬೇಕು’ ಎಂದು ದಿನೇಶ ಗೂಳಿಗೌಡ ಮನವಿ ಮಾಡಿದ್ದಾರೆ.

‘ಎಲ್ಲ ವೃಂದದ ನೌಕರರಿಗೆ ಸೇವಾ ಅವಧಿಯಲ್ಲಿ ಕನಿಷ್ಠ 3 ಬಡ್ತಿಗಳಾದರೂ ಸಿಗುವಂತೆ ವೈಜ್ಞಾನಿಕವಾಗಿ ಹಾಗೂ ತರ್ಕಬದ್ಧವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಹಳೆಯ ವೃಂದ ಮತ್ತು ನೇಮಕಾತಿ ನಿಯಮದಿಂದ ತೊಂದರೆಗೊಳಗಾದ ನೌಕರರು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅಳವಡಿಕೆಯ ನಂತರವೂ ಮತ್ತೆ ಸರಿಯಾದ ಬಡ್ತಿ ಇಲ್ಲದೆ ಅನ್ಯಾಯಕ್ಕೆ ಒಳಗಾಗದಂತೆ ಎಚ್ಚರ ವಹಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು’ ಎಂದೂ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ  ಸರ್ಕಾರಕ್ಕೆ ವರದಿ ಸಲ್ಲಿಸಿ ಎಂಟು ವರ್ಷ ಕಳೆದರೂ ಅನುಷ್ಠಾನಗೊಂಡಿಲ್ಲ. ಈಗಾಗಲೇ ತಿದ್ದುಪಡಿ ಮಾಡಿರುವ ವೃಂದ ಮತ್ತು ನೇಮಕಾತಿ ನಿಯಮಗಳ ಕರಡು ಕೂಡಾ ಅವೈಜ್ಞಾನಿಕವಾಗಿದ್ದು, ಅದರಲ್ಲಿ ಪತ್ರಿಕೋದ್ಯಮದ ಅನುಭವ ಹಾಗೂ ಪ್ರಚಾರ ಕೆಲಸವನ್ನು ಎಂದೂ ನಿರ್ವಹಿಸದ ಆಡಳಿತಾಧಿಕಾರಿ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ನೀಡುವ ಪ್ರಸ್ತಾವವಿದೆ ಎಂಬ ಆಕ್ಷೇಪಗಳಿವೆ. ಇದರಿಂದ ಇಲಾಖೆ ಕಾರ್ಯಸ್ವರೂಪದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದೂ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.