ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ | ವದಂತಿ ಹಬ್ಬಿಸುವವರ ವಿರುದ್ಧ ಕ್ರಮ: ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 1:24 IST
Last Updated 5 ಜೂನ್ 2020, 1:24 IST
ಎಸ್.ಸುರೇಶ್ ಕುಮಾರ್
ಎಸ್.ಸುರೇಶ್ ಕುಮಾರ್    

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಕಣ್ಗಾವಲಿನಲ್ಲಿ ನಡೆಯತ್ತಿರುವ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಲೋಪ ಇಲ್ಲದ ರೀತಿಯಲ್ಲಿ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಇದೇ 25ರಿಂದ ಆರಂಭವಾಗಲಿರುವ ಪರೀಕ್ಷೆಯ ಸಿದ್ಧತೆ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಸಿಇಒಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಗುರುವಾರ ಇಲ್ಲಿ ವಿಡಿಯೊ ಸಂವಾದ ನಡೆಸಿದರು.

‘ಕೆಲವು ಪಟ್ಟಭದ್ರಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು ಹಬ್ಬಿಸುತ್ತಿರುವ ವದಂತಿಗಳು ಮಕ್ಕಳಲ್ಲಿ ಪರೀಕ್ಷೆ ಕುರಿತಂತೆ ಗೊಂದಲ ಮೂಡಿಸುವ ಸಾಧ್ಯತೆಗಳಿರುವುದರಿಂದ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಮಟ್ಟ ಹಾಕಬೇಕು’ ಎಂದು ಸೂಚಿಸಿದರು.

ADVERTISEMENT

‘ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ಮಳೆ ಅನಾಹುತ ಆದರೆ, ಕೊನೆಯ ಕ್ಷಣದಲ್ಲಿ ಕಂಟೈನ್‌
ಮೆಂಟ್ ವಲಯ ಎಂದು ಘೋಷಣೆಯಾದರೆ ಬದಲಿ ಪರೀಕ್ಷಾ ಕೇಂದ್ರಗಳೊಂದಿಗೆ ಸಜ್ಜಾಗಿರಬೇಕು’ ಎಂದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಜತೆಗೆ ಸಭೆ ನಡೆಸಿದ ಶಿಕ್ಷಣ ಸಚಿವರು, ಪರೀಕ್ಷಾ ಸಿದ್ಧತೆ ಕುರಿತು ಚರ್ಚಿಸಿ
ದರು. ಪಿಯು ಇಂಗ್ಲಿಷ್‌ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣದ ಹಾಗೂ ಗಡಿ ಬಾಗದಲ್ಲಿ ಅಗತ್ಯದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಲಾಯಿತು.

ಮೌಲ್ಯಮಾಪನ ಅತಂತ್ರ
ದ್ವಿತೀಯ ಪಿಯು ವಿಜ್ಞಾನ ವಿಷಯ (ಪಿಸಿಎಂಬಿ) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಗುರುವಾರ ಉಪ ಮುಖ್ಯ ಮೌಲ್ಯಮಾಪಕರು ಹಾಜರಾಗಲಿಲ್ಲ. ಹೀಗಾಗಿ ಮೌಲ್ಯಮಾಪನ ಅತಂತ್ರಗೊಳ್ಳುವ ಆತಂಕ ಮೂಡಿದೆ.

ಶುಕ್ರವಾರದಿಂದ ಸಹಾಯಕ ಮೌಲ್ಯಮಾಪಕರು ನಗರದ ಎಂಟು ಮೌಲ್ಯಮಾಪನ ಕೇಂದ್ರಗಳಿಗೆ ಬರಬೇಕಿದ್ದು, ದೂರದ ಜಿಲ್ಲೆಗಳು ಮಾತ್ರವಲ್ಲ ಹತ್ತಿರದ ಜಿಲ್ಲೆಗಳಿಂದಲೂ ಮೌಲ್ಯಮಾಪಕರು ನಗರಕ್ಕೆ ಬರಲು ಹಿಂದೇಟು ಹಾಕಿದ್ದಾರೆ.

‘ಈ ಸ್ಥಿತಿಯಲ್ಲಿ ಮೌಲ್ಯಮಾಪನಕ್ಕೆ ಪ್ರಾಂಶುಪಾಲರು ಸಿದ್ಧರಿಲ್ಲ’ ಎಂದು ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದ್ದಾರೆ.‌ ‘ಪಿಸಿಎಂಬಿ ಮೌಲ್ಯಮಾಪನವನ್ನು ಕನಿಷ್ಠ ವಿಭಾಗಮಟ್ಟಕ್ಕಾದರೂ ವಿಸ್ತರಿಸಲಿ, ಆಗ ಅಕ್ಕಪಕ್ಕದ ಜಿಲ್ಲೆಗಳ ಮೌಲ್ಯಮಾಪಕರು ಬರಬಹುದು’ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಹೇಳಿದ್ದಾರೆ.

ಇಲಾಖೆ ಮೌನ: ಈ ಬಿಕ್ಕಟ್ಟಿನ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರತಿಕ್ರಿಯೆ ನೀಡಿಲ್ಲ. ‘ಸದ್ಯ ಕಾದು ನೋಡುತ್ತಿದ್ದೇವೆ. ಮೌಲ್ಯಮಾಪಕರು ಬಾರದೆ ಇದ್ದರೆ ಮುಂದಿನ ನಿರ್ಧಾರಕ್ಕೆ ಬರುತ್ತೇವೆ’ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರ ಹಾಜರಾತಿ 8ಕ್ಕೆ ಮುಂದೂಡಿಕೆ
ಶಿಕ್ಷಕರ ಶಾಲಾ ಹಾಜರಾತಿ ಆದೇಶವನ್ನು ಪರಿಷ್ಕರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇದೇ 8ರಿಂದ ಶಿಕ್ಷಕರು ಶಾಲೆಗೆ ಹಾಜರಾಗಬೇಕು. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿರುವ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.

‘ಶುಕ್ರವಾರ ಮುಖ್ಯ ಗುರುಗಳು ಮಾತ್ರ ಶಾಲೆಗೆ ಹಾಜರಾಗಬೇಕು. 8ರಿಂದ ಎಲ್ಲಾ ಶಿಕ್ಷಕರು, ಸಿಬ್ಬಂದಿ ಶಾಲಾ ಕಚೇರಿಯಲ್ಲಿದ್ದು, ಇದೇ 10ರಿಂದ ನಡೆಯುವ ಪೋಷಕರ ಸಭೆಗೆ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.

12,674 ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ
‘ಇದುವರೆಗೆ 12,674 ಹಾಸ್ಟೆಲ್‌ ವಾಸಿ, ವಲಸೆ ಕಾರ್ಮಿಕ ಮತ್ತು ಗಡಿಯಾಚೆಗಿನ ಮಕ್ಕಳು ತಮ್ಮ ಸನಿಹದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಬದಲಿ ಹಾಲ್‍ಟಿಕೆಟ್ ನೀಡಲಾಗುತ್ತಿದೆ’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

‘ಶಾಲೆಗಳನ್ನು ತೆರೆಯಲು ತರಾತುರಿ ಮಾಡಿಲ್ಲ, ಪೋಷಕರ ಅಭಿಪ್ರಾಯ ಪಡೆದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಗುರುವಾರ ತಮ್ಮ ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಆರ್‌ಟಿಇ ವೇಳಾಪಟ್ಟಿ
ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಇ) 2020–21ನೇ ಸಾಲಿಗೆ ಮಕ್ಕಳ ಪ್ರವೇಶಾತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಸೀಟು ಹಂಚಿಕೆಯ ಪ್ರಯುಕ್ತ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದ್ದು, ಕೊರೊನಾ ಲಾಕ್‌ಡೌನ್‌ ಕಾರಣ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಪರಿಷ್ಕೃತ ಪಟ್ಟಿಯಂತೆ ದಾಖಲಾತಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ವೆಬ್‌ಸೈಟ್‌: http;//www.schooleducation.kar.nic.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.