ADVERTISEMENT

SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 2 ಮೇ 2025, 18:55 IST
Last Updated 2 ಮೇ 2025, 18:55 IST
   

ಬೆಂಗಳೂರು: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ, ಗಮನ ಸೆಳೆದಿದ್ದಾರೆ. 

2024ರ ಪರೀಕ್ಷೆಯಲ್ಲಿ ಮೊದಲ ಭಾರಿ ಪರಿಚಯಿಸಿದ ವೆಬ್‌ಕಾಸ್ಟಿಂಗ್ ಫಲವಾಗಿ ಫಲಿತಾಂಶದಲ್ಲಿ ಭಾರಿ ಕುಸಿತ (ಶೇ 53) ಕಂಡಿತ್ತು. ದಶಕದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಫಲಿತಾಂಶ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಶೇ 35 ಅರ್ಹ ಅಂಕಗಳನ್ನು 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಗಿತ್ತು. ಇದರಿಂದ ಒಟ್ಟಾರೆ ಫಲಿತಾಂಶ ಶೇ 73.40ಕ್ಕೆ ಹಿಗ್ಗಿತ್ತು. 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಆಧಾರದಲ್ಲಿ ತೇರ್ಗಡೆಯಾಗಿದ್ದರು.

‘ಕೃಪಾಂಕ ನೀಡಿಕೆಯ ಕ್ರಮ ಟೀಕೆಗೆ ಗುರಿಯಾಗಿತ್ತು. ಈ ಬಾರಿ ವೆಬ್‌ಕಾಸ್ಟಿಂಗ್‌ ಇದ್ದರೂ ಆರಂಭದಿಂದಲೇ ಗುಣಮಟ್ಟದ ಬೋಧನೆ, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳು, ಶಾಲಾ ಶಿಕ್ಷಣ ಇಲಾಖೆ ಒಂದು ತಂಡವಾಗಿ ಶ್ರಮಿಸಿದ ಫಲವಾಗಿ ಶೇ 66.14ರಷ್ಟು ಫಲಿತಾಂಶ ದೊರೆತಿದೆ. ಖಾಸಗಿ ಹಾಗೂ ಪುನರಾವರ್ತಿತರ ಫಲಿತಾಂಶವೂ ಸೇರಿದರೆ ಒಟ್ಟು ಫಲಿತಾಂಶ 62.34 ಇದೆ. ಕಳೆದ ಬಾರಿಯ ವಾಸ್ತವ ಫಲಿತಾಂಶಕ್ಕಿಂತ ಶೇ 8.34ರಷ್ಟು ವೃದ್ಧಿಸಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ನಿರಂತರ ಪರಿಶ್ರಮ ಹಾಕಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಶಾಲೆಗಳ ಫಲಿತಾಂಶ ವೃದ್ಧಿಗೆ ಒತ್ತು ನೀಡಲಾಗಿದೆ.
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

2024ರಲ್ಲಿ ಇಬ್ಬರು 625ಕ್ಕೆ 625 ಅಂಕ ಪಡೆದಿದ್ದರು. 2024–25ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳು ಅಂತಹ ಸಾಧನೆ ಮಾಡಿದ್ದಾರೆ. 970 ವಿದ್ಯಾರ್ಥಿಗಳು 620 ಹಾಗೂ ಅದಕ್ಕಿಂತ ಹೆಚ್ಚು ಅಂಕ, ಶೇ 10.53 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು, ಶೇ 18.46 ವಿದ್ಯಾರ್ಥಿಗಳು ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಶೇ 75 ವಿದ್ಯಾರ್ಥಿಗಳ ಅಂಕ ಶೇ 60ಕ್ಕಿಂತ ಹೆಚ್ಚು ಇದೆ.

ಕನ್ನಡ ಭಾಷೆಯಲ್ಲಿ 9,573 ವಿದ್ಯಾರ್ಥಿಗಳು 125ಕ್ಕೆ 125 ಅಂಕ, ದ್ವಿತೀಯ ಭಾಷೆಯಲ್ಲಿ 7,057, ತೃತೀಯ ಭಾಷೆಯಲ್ಲಿ 17,909, ಗಣಿತದಲ್ಲಿ 3,252, ವಿಜ್ಞಾನದಲ್ಲಿ 2,451 ಸಮಾಜ ವಿಜ್ಞಾನದಲ್ಲಿ 7,974 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. 

ಬಾಲಕಿಯರೇ ಮೇಲುಗೈ: 

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ 4.04 ಲಕ್ಷ ಬಾಲಕಿಯರಲ್ಲಿ 2.96 ಲಕ್ಷ (ಶೇ 74) ತೇರ್ಗಡೆಯಾಗಿದ್ದಾರೆ. 3.90 ಲಕ್ಷ ವಿದ್ಯಾರ್ಥಿಗಳಲ್ಲಿ 2.26 ಲಕ್ಷ (ಶೇ 58.07) ತೇರ್ಗಡೆಯಾಗಿದ್ದಾರೆ. 

ನಗರ–ಗ್ರಾಮೀಣ ಸಮಬಲ:

ನಗರ ಪ್ರದೇಶ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಹೆಚ್ಚು ಕಡಿಮೆ ಸಮಬಲ ಸಾಧಿಸಿದ್ದಾರೆ. ನಗರ ಪ್ರದೇಶದ 3.35 ಲಕ್ಷ ವಿದ್ಯಾರ್ಥಿಗಳಲ್ಲಿ 2.24 ಲಕ್ಷ (67.05) ಹಾಗೂ 4.55 ಲಕ್ಷ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 2.98 ಲಕ್ಷ (ಶೇ 65.47) ಉತ್ತೀರ್ಣರಾಗಿದ್ದಾರೆ. ಗ್ರಾಮೀಣರಿಗಿಂತ ನಗರದ ವಿದ್ಯಾರ್ಥಿಗಳು ಶೇ 1.58ರಷ್ಟು ಹೆಚ್ಚು ಯಶಸ್ಸು ಕಂಡಿದ್ದಾರೆ. 

26ರಿಂದ ಪರೀಕ್ಷೆ–2: ಶೂನ್ಯ ಶುಲ್ಕ 

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಇದೇ ಮೇ 26ರಿಂದ ಜೂನ್‌ 2ರವರೆಗೆ ನಡೆಯಲಿದೆ. ಅನುತ್ತೀರ್ಣರಾದವರು ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಳ್ಳುವವರು ಮೇ 10ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಪರೀಕ್ಷೆ–1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು ಶುಲ್ಕ ಪಾವತಿಸಬೇಕು. ಉತ್ತರ ಪತ್ರಿಕೆಗಳ ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 7 ಶುಲ್ಕ ಪಾವತಿಗೆ ಮೇ 8 ಮರು ಎಣಿಕೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 11 ಹಾಗೂ ಶುಲ್ಕ ಪಾವತಿಗೆ ಮೇ 12 ಕೊನೆಯ ದಿನ.  ಪರೀಕ್ಷೆ–3 ಜೂನ್‌ 23ರಿಂದ 30ರವರೆಗೆ ನಡೆಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.

ಯಾರೂ ಅನುತ್ತೀರ್ಣರಲ್ಲ

ಎಸ್‌ಎಸ್‌ಎಲ್‌ಸಿ ಪರೀಕ್ಷೆ–1 ಮತ್ತು ಪರೀಕ್ಷೆ–2ರಲ್ಲಿ ಅನುತ್ತೀರ್ಣರಾದವರನ್ನು ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುತ್ತದೆ.  ಎಸ್‌ಎಸ್‌ಎಲ್‌ಸಿ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಇರುವ ಕಾರಣ ಅನುತ್ತೀರ್ಣರಾದ 3.17 ಲಕ್ಷ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರಿಗೆ ಮೂರು ಪರೀಕ್ಷೆಗಳ ನಂತರವೇ ಅಂಕಪಟ್ಟಿ ಪಡೆಯಲು ಅವಕಾಶ ನೀಡಲಾಗಿದೆ. 

144 ಶಾಲೆಗೆ ಶೂನ್ಯ ಫಲಿತಾಂಶ

ರಾಜ್ಯದ 144 ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಅವುಗಳಲ್ಲಿ 108 ಖಾಸಗಿ ಶಾಲೆಗಳೇ ಇವೆ. ಆರು ಸರ್ಕಾರಿ 30 ಅನುದಾನಿತ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ತೇರ್ಡೆಯಾಗಿಲ್ಲ. 329 ಸರ್ಕಾರಿ 539 ಖಾಸಗಿ ಹಾಗೂ 53 ಅನುದಾನಿತ ಶಾಲೆಗಳು ಸೇರಿ 921 ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.