ADVERTISEMENT

ಪರಿಶಿಷ್ಟ ಜಾತಿ, ಪಂಗಡ ಮೀಸಲು: ಹೋರಾಟಕ್ಕೆ ಸಂಕಲ್ಪ

140ನೇ ದಿನಕ್ಕೆ ಕಾಲಿಟ್ಟ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 20:39 IST
Last Updated 28 ಜೂನ್ 2022, 20:39 IST
ಅಹೋರಾತ್ರಿ ಧರಣಿಯಲ್ಲಿ ಮಂಗಳವಾರ (ಎಡದಿಂದ) ಛಲವಾದಿ ಮಹಾಸಂಸ್ಥಾನದ ಬಸವನಾಗಿದೇವ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರಕ್ಕೆ 139ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದಿಂದ ಪೂರಕ ಸ್ಪಂದನ ಸಿಗದಿರುವುದು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ಸ್ವಾಭಿಮಾನಿ ಎಸ್‌.ಸಿ, ಎಸ್‌.ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ವಿವಿಧ ಮಠಾಧೀಶರು ಆಗಮಿಸಿ ಬೆಂಬಲ ಸೂಚಿಸಿದರು. ಹೋರಾಟ ತೀವ್ರಗೊಳಿಸುವ ಸಂಕಲ್ಪ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ‘ಅಹೋರಾತ್ರಿ ಧರಣಿ 150 ದಿನ ತಲುಪುವುದಕ್ಕೂ ಮೊದಲು ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಜುಲೈ 11ರಂದು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಧರಣಿ 100ನೇ ದಿನ ಪೂರೈಸಿದಾಗಲೂ ಜಿಲ್ಲಾ, ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು’ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿರುವ ಎಸ್‌.ಸಿ ಮತ್ತು ಎಸ್‌.ಟಿ ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ 15ರಿಂದ ಶೇ 17ಕ್ಕೆ ಹಾಗೂ ಶೇ 3ರಿಂದ ಶೇ 7ಕ್ಕೆ ‌ಏರಿಸುವಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 2020ರ ಜುಲೈ 7ರಂದು ವರದಿ ಸಲ್ಲಿಸಿದ್ದರೂ ಸರ್ಕಾರ ಕಾಲಹರಣ ಮಾಡುತ್ತಿದೆ. ಶಿಫಾರಸು ಜಾರಿಗೊಳಿಸುವ ಇಚ್ಛೆಯಿಲ್ಲ ಎಂದು ಆಕ್ರೋಶ ಹೊರಹಾಕಿದರು.

‘ಧರಣಿಯು 108ನೇ ದಿನಕ್ಕೆ ಕಾಲಿಟ್ಟಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ’ ಎಂದು ದೂರಿದರು. ಸಾಹಿತಿಗಳು, ಚಿಂತಕರು, ಪ್ರಜ್ಞಾವಂತರು ಹಾಗೂ ದಲಿತ ಸಂಘರ್ಷ ಸಮಿತಿ, ಕನ್ನಡ ಸಂಘಟನೆ ಮುಖಂಡರು ಈ ಹೋರಾಟ ಬೆಂಬಲಿಸಿದ್ದಾರೆ. ಪ್ರತಿ 10 ವರ್ಷಕ್ಕೊಮ್ಮೆ ಮೀಸಲಾತಿ ಪರಿಷ್ಕರಣೆ ನಡೆಯಬೇಕು. ಆದರೆ, ಹಳೇ ಮೀಸಲಾತಿ ಅನುಸರಿಸಲಾಗುತ್ತಿದೆ ಎಂದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಸರ್ದಾರ ಸೇವಾಲಾಲ್ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ ಸೇರಿ ವಿವಿಧ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.