
ಮೈಸೂರು: ‘ಪ್ರಯಾಗ್ ರಾಜ್‌ನ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತ ಘಟನೆಯು ಎಲ್ಲರಿಗೂ ನೋವು ತಂದಿದೆ. ಸೂಕ್ತ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ’ ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಮೌನಿ ಅಮಾವಾಸ್ಯೆ ದಿನ ಪುಣ್ಯಸ್ನಾನದ ಬಗ್ಗೆ ಜನರಲ್ಲಿ ಉತ್ತಮ ನಂಬಿಕೆ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ದುರ್ಘಟನೆ ನಡೆದಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಬನ್ನಿ ಎಂದು ಕುಂಭಮೇಳ ಸಮಿತಿ ಜನತೆಗೆ ಮನವಿ ಮಾಡಿತ್ತು’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
‘ ಕುಂಭಮೇಳದಲ್ಲಿ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದು, ಯಾರಿಗೆ ಆದರೂ ಸಮಸ್ಯೆ ಆಗಿದ್ದರೆ ದೆಹಲಿಯಲ್ಲಿರುವ ನನ್ನ ಸಚಿವಾಲಯವನ್ನು ಸಂಪರ್ಕಿಸಿ. ಅಧಿಕಾರಿಗಳು ನಿಮ್ಮ ನೆರವಿಗೆ ಬರುತ್ತಾರೆ’ ಎಂದು ಮನವಿ ಮಾಡಿದರು.
ಖರ್ಗೆ ಹೇಳಿಕೆಗೆ ಅಸಮಾಧಾನ: ಕುಂಭಮೇಳದ ಪುಣ್ಯಸ್ನಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಟೀಕಿಸಿದ ಕುಮಾರಸ್ವಾಮಿ ‘ ಕಾಂಗ್ರೆಸ್‌ನವರ ಸಂಸ್ಕೃತಿಯೇ ಅಂತಹದ್ದು. ಅವರಿಗೆ ನಮ್ಮ ಆಚಾರ–ವಿಚಾರ, ನಂಬಿಕೆಗಳು ಎಂದರೆ ಆಗಿ ಬರುವುದಿಲ್ಲ’ ಎಂದರು.
‘ಕಾಂಗ್ರೆಸ್ ನವರು ಬೆಳಗಾವಿಯಲ್ಲಿ ಜೈ ಬಾಪು, ಜೈ ಅಂಬೇಡ್ಕರ್, ಜೈ ಸಂವಿಧಾನ್ ಎಂದು ದೊಡ್ಡ ಕಾರ್ಯಕ್ರಮ ಮಾಡಿದರು. ಗಾಂಧೀಜಿ ಮೇಲೆ ಕಾಂಗ್ರೆಸಿಗರಿಗೆ ನಂಬಿಕೆ ಇದ್ದಿದ್ದರೆ ಇಂತಹ ಮಾತುಗಳು ಬರುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.